ಸರ್ಕಾರಕ್ಕೆ ಅಭ್ಯರ್ಥಿಗಳ ಆಗ್ರಹ I ಸದ್ಯ ಪ್ರೋಬೇಷನರಿ, ಗ್ರೂಪ್ ಎ ಆಕಾಂಕ್ಷಿಗಳಿಗಷ್ಠೇ ಅವಕಾಶ
ಕರೋನಾ ಸಮಯದಲ್ಲಿ ದೇಶಾದ್ಯಂತ ಯಾವುದೇ ನೇಮಕಾತಿ ಪ್ರಕ್ರಿಯೆಗಳನ್ನು ನಡೆಸದ ಕಾರಣ ಈಗ ಕರ್ನಾಟಕ ಲೋಕ ಸೇವಾ ಆಯೋಗ ಮತ್ತು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ವಿವಿಧ ಹುದ್ದೆಗಳ ಭರ್ತಿಯಲ್ಲಿ ಕನಿಷ್ಠ 3 ವರ್ಷಗಳ ವಯೋಮಿತಿ ಸಡಿಲಿಸುವಂತೆ ಅಭ್ಯರ್ಥಿಗಳು ಆಗ್ರಹಿಸಿದ್ದಾರೆ.
ದೇಶಾದ್ಯಂತ ಕೋವಿಡ್ ಕಾಣಿಸಿಕೊಂಡಿದ್ದಾಗ ನೇಮಕಾತಿ ಪ್ರಕ್ರಿಯೆ ಸ್ಥಗಿತಗೊಳಿಸುವಂತೆ ಸರ್ಕಾರವೇ ಸೂಚನೆ ನೀಡಿತು. ನಂತರ ಹುದ್ದೆಗಳನ್ನು ಭರ್ತಿ ಮಾಡುವ ಸಂದರ್ಭದಲ್ಲಿ 3 ವರ್ಷಗಳ ವಯೋಮಿತಿ ಸಡಿಲಗೊಳಿಸಿ ಅಭ್ಯರ್ಥಿಗಳಿಗೆ ಅನೂಕೂಲ ಮಾಡಿಕೊಟ್ಟು ಕೇಂದ್ರ ಸರ್ಕಾರವು ಹುದ್ದೆಗಳನ್ನು ಭರ್ತಿ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಕೆಪಿಎಸ್ಸಿ ಪ್ರೋಬೇಷನರಿ ಹಾಗೂ ಗ್ರೂಪ್ ಎ ಪರೀಕ್ಷಾರ್ಥಿಗಳಿಗೆ ವಯೋಮಿತಿ ಸಡಿಲಿಸಿ ಅವಕಾಶ ಕಲ್ಪಿಸಲಾಗಿದೆ.ಆದರೆ ಉಳಿದ ಹುದ್ದೆಗಳ ನೇಮಕಾತಿ ಇದು ಅನ್ವಯವಾಗದಿರುವುದು ಅಚ್ಚರಿಯಾಗಿದೆ ಎಂದು ಆಕಾಂಕ್ಷಿಗಳು ಹೇಳಿದ್ದಾರೆ.
ಇಲಾಖೆಗಳಲ್ಲಿ ನೇಮಕಾತಿ.
ಕೆಪಿಎಸ್ ಸಿ ಯಿಂದ ಮೋಟಾರು ವಾಹನ ನಿರೀಕ್ಷಕ, ಪಿಡಿಒ,ಕೈಗಾರಿಕಾ ವಿಸ್ತರಣಾಧಿಕಾರಿ, ನೀರಾವರಿ ಇಲಾಖೆ ಎಇ, ತಾಲೂಕು ಹಿಂದೂಳಿದ ಕಲ್ಯಾಣಾಧಿಕಾರಿ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಲಾಗಿದೆ. ಗ್ರಾಮ ಆಡಳಿತಾಧಿಕಾರಿ,ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ, ಪಿಎಸ್ಐ ಸೇರಿ ಹಲವು ಇಲಾಖೆಗಳ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ.
ಸಿಎಂ, ಡಿಸಿಎಂ ಗೆ ಮನವಿ.
ರಾಜ್ಯ ಸರ್ಕಾರದ ವಿವಿಧ ಇಲಾಖೆಗಳು, ಸ್ವಾಯತ್ತ ಸಂಸ್ಥೆಗಳು, ನಿಗಮ ಮಂಡಳಿಗಳು, ಸರ್ಕಾರದ ಅನುದಾನಿತ ಸಂಸ್ಥೆಗಳ ವತಿಯಿಂದ ಈಗಾಗಲೇ ಅಧಿಸೂಚನೆ ಹೊರಡಿಸಿರುವ ಹಾಗೂ ಹೊರಡಿಸುವ ತಾಂತ್ರಿಕ ಹಾಗೂ ತಾಂತ್ರಿಕೇತರ ಹುದ್ದೆಗಳಿಗೆ 3 ವರ್ಷಗಳ ಹೆಚ್ಚಿನ ಅವಧಿಗೆ ವಯೋಮಿತಿ ನಿಗದಿಗೊಳಿಸಿ ಸುತ್ತೋಲೆ ಹೊರಡಿಸುವ ಬಗ್ಗೆ ಸಂಬಂಧಪಟ್ಟವರಿಗೆ ಆದೇಶ ನೀಡುವಂತೆ ಸಿಎಂ, ಡಿಸಿಎಂ ಸೇರಿ ಹಲವರಿಗೆ ಮನವಿ ಮಾಡಿದ್ದಾರೆ.
ವಯೋಮಿತಿ ಸಡಿಲಿಕೆ ಮಾಡದ ಹುದ್ದೆಗಳು.
ವಿಧಾನ ಪರಿಷತ್ ಸಚಿವಾಲಯದಲ್ಲಿರುವ ಖಾಲಿ ಹುದ್ದೆಗಳ ಭರ್ತಿಯಲ್ಲಿ 2 ವರ್ಷ ಮತ್ತು ಕೆಎಎಸ್ ಹುದ್ದೆಗಳಿಗೆ 3 ವರ್ಷಗಳ ಹೆಚ್ಚಿನ ವಯೋಮಿತಿ ಸಡಿಲಿಕ ನೀಡಲಾಗಿದೆ. ಉಳಿದ ಹುದ್ದೆಗಳಿಗೆ ಇದು ಅನ್ವಯವಾಗುವಂತಿಲ್ಲ.ಕೇಂದ್ರ ಸರ್ಕಾರವು ರೈಲ್ವೆ ಹುದ್ದೆಗಳ ಭರ್ತಿಯಲ್ಲಿ 3 ವಷ೯ ಸಡಿಲಿಕೆ ಮಾಡಿದೆ. ಆಂಧ್ರಪ್ರದೇಶವು 8 ವರ್ಷಗಳ ವಯೋಮಿತಿ ಸಡಿಲಿಸಿದೆ. ಮಧ್ಯ ಪ್ರದೇಶ, ಮಹಾರಾಷ್ಟ್ರ 3, ಒಡಿಶಾ ಸರ್ಕಾರವು 5 ವರ್ಷ ಹಾಗೂ ಇತರ ರಾಜ್ಯಗಳಲ್ಲಿಯೂ ಹಿರಿಯ ಅಭ್ಯರ್ಥಿಗಳಿಗೂ ಅವಕಾಶ ನೀಡಲಾಗಿದೆ.
ಒಂದು ಅವಧಿಗೆ ಅವಕಾಶ ಕೊಡಿ.
ಈಗ ಹಲವಾರು ಇಲಾಖೆಗಳ ಖಾಲಿ ಹುದ್ದೆಗಳನ್ನು ಭರ್ತಿ ಮಾಡುತ್ತಿರುವ ಹಿನ್ನೆಲೆಯಲ್ಲಿ ಒಂದು ಅವಧಿಗೆ ಅವಕಾಶ ಮಾಡಿಕೊಟ್ಟರೆ,ವಯೋಮಿತಿ ಮೀರಿರುವ ಅಭ್ಯರ್ಥಿಗಳಿಗೆ ಅನುಕೂಲವಾಗಲಿದೆ ಎಂದು ಮನವಿ ಮಾಡಿದ್ದಾರೆ.