ಕೆಪಿಎಸ್ಸಿ ಇತ್ತೀಚೆಗೆ 247 ಹುದ್ದೆಗಳಿಗೆ ಅಧಿಸೂಚನೆ ಪ್ರಕಟಿಸಿದ್ದು, ಏ.15 ರಿಂದ ಆನ್ ಲೈನ್ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಲಿದೆ. ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ನೇಮಕಾತಿ ನಡೆಯಲಿದೆ.
ಪಂಚಾಯತ್ ರಾಜ್ ಇಲಾಖೆಯಲ್ಲಿ ಖಾಲಿ ಇರುವ ಪಂಚಾಯತ್ ಅಭಿವೃದ್ಧಿ ಅಧಿಕಾರಿ(ಪಿಡಿಒ) ನೇಮಕಾತಿಗೆ ಅಧಿಸೂಚನೆ ಹೊರಬಿದ್ದಿದೆ.ಹೈದರಾಬಾದ್ ಕರ್ನಾಟಕಕ್ಕೆ ಮೀಸಲಿಟ್ಟ 97 ಹುದ್ದೆಗಳು ಸೇರಿದಂತೆ 247 ಹುದ್ದೆಗಳನ್ನು ಈ ವರ್ಷ ಭರ್ತಿ ಮಾಡಲಾಗುವುದು ಎಂದು ಕೆಪಿಎಸ್ಸಿ ತಿಳಿಸಿದೆ.ಈ ನೇಮಕಾತಿಗೆ ನಡೆಯುವ ಪರೀಕ್ಷೆಯ ಪಠ್ಯಕ್ರಮದ ಕುರಿತು ಕೆಪಿಎಸ್ಸಿ ಮಾಹಿತಿ ನೀಡಿದೆ.ಅವುಗಳ ವಿವರ ಇಲ್ಲಿದೆ.
ಕನ್ನಡ ಭಾಷಾ ಪರೀಕ್ಷೆ ಕಡ್ಡಾಯ.
ಪಿಡಿಓ ಹುದ್ದೆಗಳಿಗೆ ಅರ್ಹತೆ ಹೊಂದಲು ಕನ್ನಡ ಭಾಷಾ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದು ಕಡ್ಡಾಯ.ಈ ಪರೀಕ್ಷೆಯು 150 ಅಂಕಗಳ ಒಂದು ಪ್ರಶ್ನೆ ಪತ್ರಿಕೆಯನ್ನು ಒಳಗೊಂಡಿರುತ್ತದೆ.ಅಭ್ಯರ್ಥಿಯು ಅರ್ಹತೆ ಹೊಂದಲು ಈ ಪರೀಕ್ಷೆಯಲ್ಲಿ ಕನಿಷ್ಠ ಐವತ್ತು ಅಂಕಗಳನ್ನು ಗಳಿಸಲೇಬೇಕು.ಕನ್ನಡ ಭಾಷಾ ಪತ್ರಿಕೆಯನ್ನು ಎಸ್ ಎಸ್ ಎಲ್ ಸಿ ಹಂತದ ಪ್ರಥಮ ಭಾಷೆ ಕನ್ನಡವನ್ನು ಮಾನದಂಡವನ್ನಾಗಿಟಿಸಿಕೊಂಡು ಸಿದ್ಧಪಡಿಸಲಾಗುತ್ತದೆ.ಕನ್ನಡ ಭಾಷಾ ಪರೀಕ್ಷೆಯಲ್ಲಿ ಅರ್ಹರಾದ ಬಳಿಕ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಶೇಕಡವಾರು ಪ್ರಮಾಣದ ಆಧಾರದ ಮೇಲೆ ಪರೀಕ್ಷೆಗಳನ್ನು ಬರೆದು ಉತ್ತೀರ್ಣರಾಗಿದ್ದಲ್ಲಿ ಸದರಿ ಫಲಿತಾಂಶವನ್ನು ಈ ಅಧಿಸೂಚನೆಯ ಹುದ್ದೆಗಳ ಕನ್ನಡ ಭಾಷಾ ಪರೀಕ್ಷೆಗೆ ಪರಿಗಣಿಸಲಾಗುತ್ತದೆ.
-: ಇತ್ತ ಗಮನಿಸಿ :-
* ಪ್ರಶ್ನೆ ಪತ್ರಿಕೆ ಕನ್ನಡ ಮತ್ತು ಇಂಗ್ಲಿಷ್ ನಲ್ಲಿ ಇರಲಿದೆ.ಅಭ್ಯರ್ಥಿಗಳು ತಮಗೆ ಅನುಕೂಲವಾದ ಭಾಷೆಯಲ್ಲಿ ಪರೀಕ್ಷೆ ಬರೆಯಲು ಅವಕಾಶವಿದೆ.
* ಕೆಪಿಎಸ್ಸಿ ನೀಡಿರುವ ಪಠ್ಯಕ್ರಮಕ್ಕೆ ಅನುಗುಣವಾಗಿ ಅಧ್ಯಯನ ಆರಂಭಿಸುವುದು.
* ಪ್ರಚಲಿತ ಘಟನೆಗಳಿಗೆ ಸಂಬಂಧಿಸಿದ ಸಮಗ್ರ ಮಾಹಿತಿಯನ್ನು ಕಲೆ ಹಾಕಿ ಟಿಪ್ಪಣಿ ಮಾಡಿಕೊಳ್ಳುವುದು.
* ಪ್ರತಿದಿನ ಪತ್ರಿಕೆಗಳ ಸಂಪಾದಕೀಯವನ್ನು ಓದುವುದು.
ಸ್ಪರ್ಧಾತ್ಮಕ ಪರೀಕ್ಷೆ ಹೇಗಿರುತ್ತದೆ?
ಈ ಪರೀಕ್ಷೆಯು ತಲಾ 100 ಅಂಕಗಳ ಎರಡು ಪ್ರಶ್ನೆ ಪತ್ರಿಕೆಗಳನ್ನು ಒಳಗೊಂಡಿರುತ್ತದೆ. ವಸ್ತುನಿಷ್ಠ ಬಹು ಆಯ್ಕೆ ಮಾದರಿಯಲ್ಲಿ ಪ್ರಶ್ನೆ ಪತ್ರಿಕೆಗಳು ಇರಲಿವೆ.ಎರಡು ಪತ್ರಿಕೆಗಳಲ್ಲಿನ ತಪ್ಪು ಉತ್ತರಗಳಿಗೆ ಋಣಾತ್ಮಕ ಅಂಕಗಳನ್ನು ಪರಿಗಣಿಸಿ ಅಭ್ಯರ್ಥಿಯು ಗಳಿಸುವ ಒಟ್ಟು ಅಂಕಗಳನ್ನು ಪರಿಗಣಿಸಲಾಗುತ್ತದೆ.ಅಂದರೆ ಪ್ರತಿ ತಪ್ಪು ಉತ್ತರಕ್ಕೆ ಪ್ರಶ್ನೆಗೆ ನಿಗದಿ ಪಡಿಸಿದ ಅಂಕಗಳ ನಾಲ್ಕನೇ ಒಂದು ಭಾಗದಷ್ಟು ಅಂಕಗಳನ್ನು ಕಡಿತಗೊಳಿಸಲಾಗುತ್ತದೆ. ಅಭ್ಯರ್ಥಿಗಳು ಈ ಎರಡು ಪತ್ರಿಕೆಗಳ ಪರೀಕ್ಷೆಗಳಿಗೆ ಹಾಜರಾಗುವುದು ಕಡ್ಡಾಯವಾಗಿದೆ.
ಪ್ರಶ್ನೆ ಪತ್ರಿಕೆ -1
ಇದರಲ್ಲಿ ಸಾಮಾನ್ಯ ಜ್ಞಾನಕ್ಕೆ ಸಂಬಂಧಿಸಿದ ಪ್ರಶ್ನೆಗಳು ಇರಲಿದ್ದು,ಈ ಪರೀಕ್ಷೆ ಎದುರಿಸಲು ಒಂದುವರೆ ಗಂಟೆ ಕಾಲಾವಕಾಶ ಇರುತ್ತದೆ.ಈ ಪತ್ರಿಕೆಯು ಪ್ರಚಲಿತ ಘಟನೆಗಳಿಗೆ ಸಂಬಂಧಿಸಿದ ವಿಷಯಗಳ ಸಾಮಾನ್ಯ ಜ್ಞಾನ,ಸಾಮಾನ್ಯ ವಿಜ್ಞಾನ ವಿಷಯ,ಭೂಗೋಳಶಾಸ್ತ್ರ ವಿಷಯಗಳು,ಸಮಾಜ ವಿಜ್ಞಾನ ವಿಷಯಗಳು,ಭಾರತೀಯ ಸಮಾಜ ಮತ್ತು ಅದರ ಬೆಳವಣಿಗೆಗಳ ಇತಿಹಾಸ,ಭಾರತದ ಸಂವಿಧಾನ ಮತ್ತು ಸಾರ್ವಜನಿಕ ಆಡಳಿತ,ಪ್ರಾಯೋಗಿಕ ಜ್ಞಾನ ಮತ್ತು ಬೌದ್ಧಿಕ ಸಾಮರ್ಥ್ಯದ ವಿಷಯಗಳು (ಎಸ್ ಎಸ್ ಎಲ್ ಸಿ ಹಂತ) ಕರ್ನಾಟಕದ ಸಾಮಾಜಿಕ ಮತ್ತು ಸಾಂಸ್ಕೃತಿಕ ಇತಿಹಾಸ,ಸ್ವಾತಂತ್ರ್ಯ ನಂತರದಲ್ಲಿ ಕರ್ನಾಟಕದ ಭೂ ಸುಧಾರಣೆಗಳು ಮತ್ತು ಸಾಮಾಜಿಕ ಬದಲಾವಣೆಗಳು,ಕರ್ನಾಟಕದ ಅರ್ಥವ್ಯವಸ್ಥೆ,ಅದರ ಸಾಮರ್ಥ್ಯ ಮತ್ತು ದೌರ್ಬಲ್ಯತೆ ಪ್ರಸ್ತುತ ಸ್ಥಿತಿ ಗತಿ ಕುರಿತ ವಿಷಯಗಳು, ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಸಂಸ್ಥೆಗಳು ಮತ್ತು ಗ್ರಾಮೀಣ ಸಹಕಾರ ಸಂಸ್ಥೆಗಳ ವಿಷಯಗಳು, ಕರ್ನಾಟಕ ಪರಿಣಾಮಕಾರಿ ಆಡಳಿತಕ್ಕಾಗಿ ವಿಜ್ಞಾನ ಮತ್ತು ತಂತ್ರಜ್ಞಾನದ ಪಾತ್ರ ಕುರಿತ ವಿಷಯಗಳನ್ನು ಒಳಗೊಂಡಿರುತ್ತದೆ.
ಪ್ರಶ್ನೆ ಪತ್ರಿಕೆ -2
ಪರೀಕ್ಷೆ ಬರೆಯಲು 2 ಗಂಟೆಗಳ ಸಮಯ ಇರಲಿದೆ.35 ಅಂಕಗಳಿಗೆ ಸಾಮಾನ್ಯ ಕನ್ನಡ, 35 ಅಂಕಗಳಿಗೆ ಸಾಮಾನ್ಯ ಇಂಗ್ಲಿಷ್, ಹಾಗೂ 30 ಅಂಕಗಳಿಗೆ ಕಂಪ್ಯೂಟರ್ ಜ್ಞಾನದ ಪ್ರಶ್ನೆಗಳು ಇರಲಿವೆ. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಸಾಮಾನ್ಯ ಕನ್ನಡವನ್ನು ಹೊರತುಪಡಿಸಿ. ಉಳಿದ ಪ್ರಶ್ನೆಗಳು ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳೆರಡಲ್ಲಿಯೂ ಇರುತ್ತದೆ.