SSLC RESULT:2025-26 ಶೈಕ್ಷಣಿಕ ಎಸ್ಸೆಸ್ಸೆಲ್ಸಿ ಫಲಿತಾಂಶ(SSLC RESULT) ವೃದ್ಧಿಗೆ ಇನ್ನೂ ಮುಂದೆ ಮಧ್ಯವಾರ್ಷಿಕ, ಪ್ರಿಪರೇಟರಿ ಪರೀಕ್ಷೆಗೂ ವೆಬ್ ಕಾಸ್ಟಿಂಗ್.
SSLC RESULT:ಎಸ್ಸೆಸ್ಸೆಲ್ಸಿ ಫಲಿತಾಂಶ(SSLC RESULT)ವೃದ್ಧಿಗಾಗಿ 2025-26ನೇ ಸಾಲಿನ ಶೈಕ್ಷಣಿಕ ವರ್ಷಾರಂಭದಲ್ಲಿಯೇ ಕಾರ್ಯಾಚರಣೆ ಆರಂಭಿಸಿರುವ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ 29 ಅಂಶಗಳ ಕಾರ್ಯಕ್ರಮ ರೂಪಿಸಿದೆ.
ಮಧ್ಯವಾರ್ಷಿಕ ಹಾಗೂ ಪೂರ್ವಸಿದ್ಧತಾ ಪರೀಕ್ಷೆಗಳನ್ನು ವೆಬ್‌ಕಾಸ್ಟಿಂಗ್‌ನಲ್ಲಿ ನಡೆಸುವುದು. ಬೆಳಗಿನ ಜಾವ ಮಕ್ಕಳಿಗೆ ಕರೆ ಮಾಡಿ ಅಭ್ಯಾಸ ಮಾಡುತ್ತಿರುವುದನ್ನು ಖಚಿತಪಡಿಸಿಕೊಳ್ಳುವುದು. ಜುಲೈ ತಿಂಗಳನಿಂದಲೇ ಪ್ರತಿ ದಿನ ಶಾಲಾ ಅವಧಿಯ ಮೊದಲು ವಿಶೇಷ ತರಗತಿ, ಶಾಲಾ ಅವಧಿಯ ನಂತರ ವಿದ್ಯಾರ್ಥಿಗಳ ಬರವಣಿಗೆ ಹೆಚ್ಚಿಸಲು ವಿಷಯವಾರು ಮಾದರಿ ಪ್ರಶ್ನೆಪತ್ರಿಕೆಗಳಿಗೆ ಉತ್ತರ ಬರೆಸುವುದನ್ನು ನಡೆಸಬೇಕು. ಸರಾಸರಿ, ಸರಾಸರಿಗಿಂತ ಕಡಿಮೆ ಹಾಗೂ ಹೆಚ್ಚು ಎಂಬ 3 ಗುಂಪುಗಳನ್ನು ರಚಿಸಬೇಕು. ಪ್ರತಿ ಶಿಕ್ಷಕರಿಗೆ ಸಮನಾಗಿ ವಿದ್ಯಾರ್ಥಿಗಳನ್ನು ದತ್ತು ನೀಡುವುದು ಸೇರಿ 29 ಅಂಶಗಳನ್ನು ಪಟ್ಟಿ ಮಾಡಿ ಶಾಲೆಗಳಿಗೆ ಸೂಚನೆ ನೀಡಿದೆ. ಸಾಮಾನ್ಯವಾಗಿ ನವೆಂಬರ್-ಡಿಸೆಂಬರ್ ನಲ್ಲಿ ಪ್ರಕಟಿಸುತ್ತಿದ್ದ ಕಾರ್ಯಕ್ರಮಗಳ ಪಟ್ಟಿಯನ್ನು ಈ ಬಾರಿ ವರ್ಷಾರಂಭದಲ್ಲಿಯೇ ಪ್ರಕಟಿಸಿ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ವಿ.ರಶ್ಮಿ ಮಹೇಶ್ ಆದೇಶಿಸಿದ್ದಾರೆ.
SSLC RESULT:ಪ್ರಮುಖ ಅಂಶಗಳು.
• ಎಸ್ಸೆಸ್ಸೆಲ್ಸಿ(SSLC) ವಾರ್ಷಿಕ ಪರೀಕ್ಷೆಯ ಪಠ್ಯವಸ್ತುವನ್ನು ಡಿಸೆಂಬರ್ ತಿಂಗಳನೊಳಗೆ ಪೂರ್ಣಗೊಳಿಸಲು ಕ್ರಮ ವಹಿಸಬೇಕು.ಸೇತುಬಂಧ ಮೌಲ್ಯಮಾಪನದ ಆಧಾರದಲ್ಲಿ ಗುರುತಿಸಲ್ಪಟ್ಟ ವಿದ್ಯಾರ್ಥಿಗಳಿಗೆ ಶಾಲೆಯಲ್ಲಿ ಪ್ರತಿದಿನ ವೇಳಾಪಟ್ಟಿಯಂತೆ ತರಗತಿಗಳನ್ನು ನಡೆಸುವುದು.
• ಡಯಟ್ ಅಧಿಕಾರಿಗಳು ವೇಳಾಪಟ್ಟಿ ತಯಾರಿಸಿ ನೀಡಬೇಕು ಹಾಗೂ ವಾರದಲ್ಲಿ 5 ದಿನ ಶಾಲೆಗಳಿಗೆ ಭೇಟಿ ಕೊಟ್ಟು ಪರಿಹಾರ ಬೋಧನಾ ತರಗತಿಗಳಲ್ಲಿ ಭಾಗವಹಿಸುವುದು. ಇದನ್ನು ಸ್ಮಾಟ್ಸ್‌ನಲ್ಲಿ ಅಪ್‌ಡೇಟ್ ಮಾಡಬೇಕು.
• ಶಾಲೆಯ ಪ್ರಾರ್ಥನಾ ಸಮಯದಲ್ಲಿ ಶಿಕ್ಷಕರು ತಮ್ಮ ಮೊಬೈಲ್ ಫೋನ್ ಬಳಕೆ ಕಡಿಮೆ ಮಾಡಿ ಪೌಷ್ಟಿಕ ಆಹಾರ ಸೇವನೆಯ ಮಹತ್ವ ತಿಳಿಸಬೇಕು.
• ಶಾಲೆಯಲ್ಲಿಯೇ ಪ್ರತಿ ಪಾಠದ ಕಲಿಕೆಯ ಮೌಲ್ಯಾಂಕನ ಮತ್ತು ವಿದ್ಯಾರ್ಥಿವಾರು ಕಲಿಕೆ ಆಧಾರಿತ ಟ್ರ್ಯಾಕಿಂಗ್ ವ್ಯವಸ್ಥೆಯನ್ನು ಕಲ್ಪಿಸಬೇಕು.
• ದೈಮಾಸಿಕ ಪಾಲಕ-ಶಿಕ್ಷಕರ ಸಭೆಗಳನ್ನು ಮಾರ್ಚ್‌ವರೆಗೂ ನಡೆಸಬೇಕು.
• ಪಾಲಕರೊಂದಿಗೆ ಸಮಾಲೋಚಿಸಿ ಪರೀಕ್ಷಾ ಒತ್ತಡ ನಿವಾರಿಸಲು ಮಾರ್ಗದರ್ಶನ ನೀಡುವುದು.
• ಒಂದು ವಾರಕ್ಕಿಂತ ಹೆಚ್ಚಿನ ಸಮಯ ಗೈರಾಗುವ ವಿದ್ಯಾರ್ಥಿಗಳ ಮನೆಗೆ ಭೇಟಿ ನೀಡಿ ಕಾರಣ ತಿಳಿದು ಶಾಲೆಗೆ ಮರಳುವುದನ್ನು ಖಚಿತಪಡಿಸುವುದು, ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಕರೆತರುವುದು.
• ನಿಧಾನಗತಿಯ ಕಲಿಕಾ ವಿದ್ಯಾರ್ಥಿಗಳ ಕಲಿಕಾ ಬಲವರ್ಧನೆಗೆ ಗುಂಪು ಅಧ್ಯಯನ ಚಟುವಟಿಕೆಗಳನ್ನು ರೂಪಿಸಬೇಕು.
• ವಿಷಯವಾರು, ಘಟಕವಾರು ಪ್ರಶ್ನೆಕೋಠಿಗಳನ್ನು ವಿವಿಧ ಡಯಟ್ ಮುಖಾಂತರ ಡಿಎಸ್‌ಇಆರ್‌ಟಿ(DSERT) ಈಗಾಗಲೇ ಸಿದ್ಧಪಡಿಸಿದೆ. ಪ್ರಶ್ನೆ ಕೋಠಿಯಲ್ಲಿನ ಪ್ರಶ್ನೆಗಳನ್ನು ಸುಲಭ, ಸಾಧಾರಣ ಮತ್ತು ಕ್ಲಿಷ್ಟಕರ ಎಂದು ಶ್ರೇಣೀಕರಿಸಲಾಗಿದೆ.
• ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಈ ಪ್ರಶ್ನೆಕೋಠಿಯನ್ನು ಸದುಪಯೋಗಪಡಿಸಿಕೊಳ್ಳುವುದು. ಎಫ್‌ಎ-1, 2, 3 ಮತ್ತು 4. ಹಾಗೂ ಎಎ-1 ಪ್ರಶ್ನೆಪತ್ರಿಕೆ ಸಿದ್ಧಪಡಿಸುವ ವೇಳೆ ಇದನ್ನು ಬಳಸಿಕೊಳ್ಳುವುದು.
SSLC RESULT: ವಿದ್ಯಾರ್ಥಿಗಳಿಗೆ ಪರೀಕ್ಷಾ ಭಯ ಹೋಗಲಾಡಿಸಿ.
ವಿಷಯವಾರು ನೀಲಿನಕ್ಷೆ ಪ್ರಕಟಿಸಿ ಘಟಕವಾರು ಪ್ರಶ್ನೆಯ ಸ್ವರೂಪ, ಕಠಿಣತೆಯ ಮಟ್ಟವನ್ನು ತಿಳಿಸಬೇಕು. 2026ರ ಜನವರಿ ಮೊದಲ ವಾರದಲ್ಲಿ ಮೊದಲ ಅಥವಾ ಕೊನೇ ವಾರದಲ್ಲಿ ಎರಡನೇ, ಫೆಬ್ರವರಿ ಕೊನೇ ವಾರದಲ್ಲಿ ಮೂರನೇ ಪೂರ್ವ ಸಿದ್ಧತಾ ಪರೀಕ್ಷೆ ನಡೆಸಿ ಪರೀಕ್ಷಾ ಭಯ ಹೋಗಲಾಡಿಸಬೇಕು.