EDUCATION:ಲಿಖಿತ ಪರೀಕ್ಷೆ ಮೂಲಕ ಪ್ರಾಥಮಿಕ, ಪ್ರೌಢಶಾಲಾ ಸಹ ಶಿಕ್ಷಕ ಹುದ್ದೆಗಳ ಭರ್ತಿಗೆ, ಅಧಿಸೂಚನೆ ಹೊರಡಿಸಿದೆ.
EDUCATION: ಆಯುಕ್ತರ ಕಛೇರಿ, ಶಾಲಾ ಶಿಕ್ಷಣ(EDUCATION) ಇಲಾಖೆ ಅಧಿಸೂಚನೆಯೊಂದನ್ನು ಹೊರಡಿಸಿದೆ. 2024-25ನೇ ಶೈಕ್ಷಣಿಕ ಸಾಲಿನ ಕರ್ನಾಟಕ ರಾಜ್ಯದ ಪ್ರಾಥಮಿಕ, ಪ್ರೌಢಶಾಲಾ ಸಹ ಶಿಕ್ಷಕರು ಹಾಗೂ ಮುಖ್ಯ ಶಿಕ್ಷಕರು ತತ್ಸಮಾನ ವೃಂದದ ನಿರ್ದಿಷ್ಟಪಡಿಸಿದ ಹುದ್ದೆಗಳಿಗೆ (Specified Post) ಲಿಖಿತ ಪರೀಕ್ಷೆ ನಡೆಸುವ ಮೂಲಕ ಹುದ್ದೆಗಳನ್ನು ಭರ್ತಿ ಮಾಡುವ ಬಗ್ಗೆ ಎಂಬ ಈ ವಿಷಯವನ್ನು ಅಧಿಸೂಚನೆ ಒಳಗೊಂಡಿದೆ.
ಅಧಿಸೂಚನೆಯಲ್ಲಿ ಶಾಲಾ ಶಿಕ್ಷಣ(EDUCATION) ಇಲಾಖೆಯು ಕರ್ನಾಟಕ ರಾಜ್ಯದಲ್ಲಿ ಶಾಲಾ ವಯೋಮಾನದ ಮಕ್ಕಳ ಸಾರ್ವತ್ರಿಕ ದಾಖಲಾತಿ ಮತ್ತು ಹಾಜರಾತಿ, ಶಾಲೆಯಲ್ಲಿ ಉಳಿಯುವಿಕೆಯನ್ನು ಸಾಧಿಸುವುದಲ್ಲದೆ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣವನ್ನು ನೀಡುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳುತ್ತಿದೆ ಎಂದು ಹೇಳಿದೆ. ಇದಕ್ಕಾಗಿ ಹಲವು ಪ್ರೋತ್ಸಾಹಕ ಯೋಜನೆಗಳನ್ನು ಅನುಷ್ಠಾನಗೊಳಿಸಿದೆ.
ಈ ರೀತಿ ಶೈಕ್ಷಣಿಕ ಶಿಕ್ಷಣದ ಗುಣಮಟ್ಟವನ್ನು ಉತ್ತಮಪಡಿಸುವಲ್ಲಿ ಅನುಷ್ಠಾನ, ಮೇಲ್ವಿಚಾರಣೆ, ಉಸ್ತುವಾರಿ ಹಾಗೂ ಮಾರ್ಗದರ್ಶನ ಅತೀ ಪ್ರಮುಖವೆಂಬುದನ್ನು ಮನಗಾಣಲಾಗಿರುತ್ತದೆ. ಅಂತಹ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಲು ಶೈಕ್ಷಣಿಕ ಉಸ್ತುವಾರಿ ಅಧಿಕಾರಿ/ ಸಿಬ್ಬಂದಿ ನೇಮಕದ ಅವಶ್ಯಕತೆ ಇರುತ್ತದೆ.
ಇಂತಹ ಇಲಾಖಾ ಹುದ್ದೆಗಳಿಗೆ ಲಿಖಿತ ಪರೀಕ್ಷೆ ಮೂಲಕ ಅರ್ಹ ಸರ್ಕಾರಿ ಪ್ರಾಥಮಿಕ/ ಪ್ರೌಢಶಾಲಾ ಸಹಶಿಕ್ಷಕರು ಮತ್ತು ಮುಖ್ಯ ಶಿಕ್ಷಕರು/ ತತ್ಸಮಾನ ವೃಂದದ ಶಿಕ್ಷಕರು/ ಅಧಿಕಾರಿಗಳನ್ನು ಆಯ್ಕೆಮಾಡಿ ನಿರ್ದಿಷ್ಟಪಡಿಸಿದ ಹುದ್ದೆಗಳಿಗೆ ನಿಯೋಜಿಸಲು ಅವಕಾಶ ಕಲ್ಪಿಸಲಾಗಿದೆ.
ಆಯ್ಕೆ ಪರೀಕ್ಷೆಯನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ, ಬೆಂಗಳೂರು ಇವರ ವತಿಯಿಂದ ನಡೆಸಲಾಗುವುದು. ಸದರಿ ಪರೀಕ್ಷೆಯನ್ನು ಪರೀಕ್ಷಾ ಮಂಡಳಿಯ ನಿಯಮಗಳಂತೆ ಗೌಪ್ಯತೆಯೊಂದಿಗೆ ನಿರ್ವಹಿಸುವುದು. ಅಧಿಸೂಚಿಸಲಾಗುವ ನಿರ್ದಿಷ್ಟಪಡಿಸಿದ ಹುದ್ದೆಗಳ ಕಾರ್ಯಾವಧಿ ಗರಿಷ್ಟ 5 ವರ್ಷ. ಸದರಿ ಈ ಅವಧಿ ಪೂರ್ಣಗೊಳಿಸಿದ ನಂತರ ವರ್ಗಾವಣೆ ನಿಯಮಾನುಸಾರ ಶಾಲೆಗಳಿಗೆ ಕೌನ್ಸಿಲಿಂಗ್ ಮೂಲಕ ಸ್ಥಳನಿಯುಕ್ತಿ ಗೊಳಿಸಲಾಗುವುದು ಎಂದು ತಿಳಿಸಿದೆ.
ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳು (ಶಿಕ್ಷಕರ ವರ್ಗಾವಣೆ ನಿಯಂತ್ರಣ) ಅಧಿನಿಯಮ-2020ರ ನಿಯಮ (2) ರ ಉಪನಿಯಮ (ಎಚ್)ರಲ್ಲಿ ಅಧಿಸೂಚಿಸಿರುವ ನಿರ್ದಿಷ್ಟಪಡಿಸಿದ ಹುದ್ದೆಗಳ ವಿವರ ಕೆಳಕಂಡಂತೆ ಇರುತ್ತದೆ.
• ಪ್ರಾಥಮಿಕ ಶಾಲಾ ಸಹ ಶಿಕ್ಷಕರು. ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿಗಳು [ CRP], ಕ್ಷೇತ್ರ ಸಂಪನ್ಮೂಲ ವ್ಯಕ್ತಿ [ BRP-ಪ್ರಾಥಮಿಕ], ತಾಂತ್ರಿಕ ಸಹಾಯಕರು (ಪ್ರಾಥಮಿಕ)
• ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರು ಹಾಗೂ ಹಿರಿಯ ಮುಖ್ಯ ಶಿಕ್ಷಕರು.
• ಪ್ರೌಢ ಶಾಲಾ ಸಹ ಶಿಕ್ಷಕರು. ಕ್ಷೇತ್ರ ಸಂಪನ್ಮೂಲ ವ್ಯಕ್ತಿ [BRP-ಪ್ರೌಢ], ತಾಂತ್ರಿಕ ಸಹಾಯಕರು (ಪ್ರೌಢ), ತಾಂತ್ರಿಕ ಸಹಾಯಕರು (ಪ್ರೌಢ).
• ಪ್ರೌಢ ಶಾಲಾ ಮುಖ್ಯ ಶಿಕ್ಷಕರು. ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ [B.R.P],ಸಹಾಯಕ ಯೋಜನಾ ಸಮನ್ವಯಾಧಿಕಾರಿ [ A.P.C] [ಸಮಗ್ರ ಶಿಕ್ಷಣ(EDUCATION) ಕರ್ನಾಟಕ],ವಿಷಯ ಪರಿವೀಕ್ಷಕರು, [ಉಪನಿರ್ದೇಶಕರ ಕಛೇರಿ ಮತ್ತು ವಿಭಾಗೀಯ ಸಹ ನಿರ್ದೇಶಕರ ಕಛೇರಿ], ಸಹಾಯಕ ನಿರ್ದೇಶಕರು [ಪ್ರಧಾನ ಮಂತ್ರಿ ಪೋಷಣೆ ಶಕ್ತಿ ನಿರ್ಮಾಣ್]
ಅರ್ಜಿ ಸಲ್ಲಿಸುವ ವಿಧಾನ.
• ಶಿಕ್ಷಕರ ದತ್ತಾಂಶ ಸಂಗ್ರಹಣೆ ಪೋರ್ಟಲ್‌ಗೆ ಲಾಗ್-ಇನ್ ಆಗಲು ಬಳಸುವ ಕೆ.ಜಿ.ಐ.ಡಿ(KGID) ಸಂಖ್ಯೆಯನ್ನು ಬಳಸಿ, ಈ ಪ್ರಕ್ರಿಯೆಗಾಗಿಯೇ ಸಿದ್ಧಪಡಿಸಿರುವ E.E.D.S ತಂತ್ರಾಂಶದಲ್ಲಿ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ.
• ಅರ್ಜಿ ಸಲ್ಲಿಸುವ ಮೊದಲು ಅಭ್ಯರ್ಥಿಗಳು ತಮ್ಮ ಸಂಪೂರ್ಣ ಸೇವಾ ವಿವರಗಳನ್ನು ಈಗಾಗಲೇ ಇಇಡಿಎಸ್(EEDS) ತಂತ್ರಾಂಶದಲ್ಲಿ ನಮೂದಿಸಿದ್ದು, EEDSನಲ್ಲಿ ತಪ್ಪಾಗಿ ಮಾಹಿತಿಯನ್ನು ಇಂದೀಕರಿಸಿದ್ದಲ್ಲಿ ಅರ್ಜಿಯಲ್ಲಿ ಹಾಗೂ ಅಂತಿಮ ಪಟ್ಟಿಯಲ್ಲಿ ಹಾಗುವ ವ್ಯತ್ಯಾಸಗಳಿಗೆ ಸಂಬಂಧಿಸಿದ ಶಿಕ್ಷಕರೇ ಹೊಣೆಗಾರರಾಗಿರುತ್ತಾರೆ.
• ಹೆಚ್ಚಿನ ಶೈಕ್ಷಣಿಕ ಅರ್ಹತೆ, ಸೇವಾ ಅನುಭವ, ಗಣಕಯಂತ್ರ ತರಬೇತಿ ಹಾಗೂ ಶೈಕ್ಷಣಿಕ ಪ್ರಕಟಣೆಗಳಿಗೆ ಸಂಬಂಧಿಸಿದ ಪೂರಕ ದಾಖಲೆಗಳನ್ನು ಅರ್ಜಿಯ ಜೊತೆಯಲ್ಲಿಯೇ ಅಪ್-ಲೋಡ್ ಮಾಡಬೇಕು ಮತ್ತು ಇದರ ಮೂಲ ಪ್ರತಿಗಳನ್ನು ಆಯಾ ಜಿಲ್ಲಾ ಉಪನಿರ್ದೇಶಕರು [ಆಡಳಿತ], ಇವರಿಗೆ ಸಲ್ಲಿಸುವುದು.
ಅರ್ಹತಾ ಷರತ್ತುಗಳು ಏನು?
• ಖಾಯಂ ಪೂರ್ವ ಸೇವಾವಧಿ ತೃಪ್ತಿಕರವಾಗಿ ಘೋಷಣೆಯಾಗಿರಬೇಕು.
• ವಯೋಮಿತಿ 55 ವರ್ಷಗಳನ್ನು ಮೀರಿರಬಾರದು.
• ಪ್ರಾಥಮಿಕ ವಿಭಾಗದ ಶಿಕ್ಷಣ ಸಂಯೋಜಕರ ಹುದ್ದೆಗೆ ಗರಿಷ್ಟ ವಯೋಮಿತಿ 57 ವರ್ಷ ವಯೋಮಾನ ಮೀರಿರಬಾರದು ಮತ್ತು ಅದೇ ಸ್ಥಳದಲ್ಲಿ ಕರ್ತವ್ಯ ನಿರ್ವಹಿಸಿರುವ ಕನಿಷ್ಟ ಸೇವಾವಧಿಯ ಮಿತಿಯಿಂದ ವಿನಾಯಿತಿ ನೀಡಲಾಗಿದೆ.
• ವಿಷಯ ಪರಿವೀಕ್ಷಕರ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರು ಆಯಾಯ ವಿಷಯದಲ್ಲಿ ಸರ್ಕಾರಿ ಪ್ರೌಢ ಶಾಲೆಗಳಲ್ಲಿ/ ಡಯಟ್/ TTIಗಳಲ್ಲಿ ಮುಖ್ಯ ಶಿಕ್ಷಕರ/ ತತ್ಸಮಾನ ವೃಂದದಲ್ಲಿ ಕನಿಷ್ಠ 10 ವರ್ಷಗಳಿಗೆ ಕಡಿಮೆ ಇಲ್ಲದಂತೆ ಬೋಧನಾ ಅನುಭವ ಇರಬೇಕು.
• ಅಭ್ಯರ್ಥಿಯು ಪ್ರಸ್ತುತ ಹುದ್ದೆ ಹಾಗೂ ಸ್ಥಳದಲ್ಲಿ ಕನಿಷ್ಠ 3 ವರ್ಷಗಳ ಸೇವೆಯನ್ನು ಪೂರೈಸಿರಬೇಕು.
• ಈ ಹಿಂದೆ ನಿರ್ದಿಷ್ಟಪಡಿಸಿದ ಹುದ್ದೆಗಳಲ್ಲಿ ಕೆಲಸ ನಿರ್ವಹಿಸಿ ಶಾಲೆಗೆ ಹಿಮ್ಮುಖ ವರ್ಗಾವಣೆಗೊಂಡು ಶಾಲೆಯಲ್ಲಿ ಕೆಲಸ ನಿರ್ವಹಿಸುತ್ತಿರುವವರು ಕನಿಷ್ಟ 5 ವರ್ಷಗಳು ಪೂರ್ಣವಾಗಿ ಶಾಲೆಯಲ್ಲಿ ಸೇವೆ ಸಲ್ಲಿಸಿರಬೇಕು.
ತಾಂತ್ರಿಕ ಸಹಾಯಕರ/ ಕಾರ್ಯಕ್ರಮ ಸಹಾಯಕರ ಹುದ್ದೆಯಲ್ಲಿ ಪರೀಕ್ಷೆಯ ಮುಖಾಂತರವಲ್ಲದೇ ಕರ್ತವ್ಯ ನಿರ್ವಹಿಸುತ್ತಿರುವ ಪ್ರಾಥಮಿಕ ಹಾಗೂ ಪ್ರೌಢಶಾಲಾ ವೃಂದದ ಶಿಕ್ಷಕರು ಸದರಿ ಹುದ್ದೆಯಲ್ಲಿ ಮುಂದುವರೆಯಬೇಕಾದಲ್ಲಿ ‘ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳ (ಶಿಕ್ಷಕರ ವರ್ಗಾವಣೆ ನಿಯಂತ್ರಣ) ಅಧಿನಿಯಮ 2020’ ಸೆಕ್ಷನ್ 8(1)ರಲ್ಲಿ ಆದೇಶಿಸಿರುವಂತೆ ಲಿಖಿತ ಪರೀಕ್ಷೆಗೆ ಹಾಜರಾಗುವುದು ಕಡ್ಡಾಯವಾಗಿರುತ್ತದೆ. ಲಿಖಿತ ಪರೀಕ್ಷೆಯ ನಂತರ ನಿಯಮಾನುಸಾರ ಆನ್‌ಲೈನ್ ಕೌನ್ಸಿಲಿಂಗ್ ಮೂಲಕ ಸದರಿ ಹುದ್ದೆಗಳಿಗೆ ಸ್ಥಳ ನಿಯುಕ್ತಿಗೊಳಿಸಲಾಗುವುದು.