Government Employee: ಆಗಸ್ಟ್ 27ರಂದು ಸರ್ಕಾರಿ ನೌಕರರಿಗೆ ವಿಶೇಷ ಸಾಂದರ್ಭಿಕ ರಜೆ-2024.
ಬೆಂಗಳೂರು, ಆಗಸ್ಟ್ 09: ಕರ್ನಾಟಕ ಸರ್ಕಾರ ಆಗಸ್ಟ್ 27ರಂದು ಸರ್ಕಾರಿ ನೌಕರರಿಗೆ ವಿಶೇಷ ಸಾಂದರ್ಭಿಕ ರಜೆ ಘೋಷಣೆ ಮಾಡಿ ಆದೇಶ ಹೊರಡಿಸಿದೆ. ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) 2023-24ನೇ ಸಾಲಿನ ಗೆಜೆಟೆಡ್ ಪ್ರೊಬೇಷನರ್ಸ್ 384 ಹುದ್ದೆಗಳ ನೇಮಕಾತಿ ಪೂರ್ವಭಾವಿ ಪರೀಕ್ಷೆಯನ್ನು ಅಂದು ನಡೆಸಲಿದ್ದು, ಪರೀಕ್ಷೆ ಬರೆಯುವ ಅಭ್ಯರ್ಥಿಗಳಿಗೆ ಅನುಕೂಲವಾಗುವಂತೆ ರಜೆ ಘೋಷಿಸಲಾಗಿದೆ.
ಶುಕ್ರವಾರ ಈ ಕುರಿತು ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ ಎಲಿಷ ಆಂಡ್ರ್ಯೂಸ್ ಸರ್ಕಾರದ ಉಪ ಕಾರ್ಯದರ್ಶಿ, ಸಿಆಸು ಇಲಾಖೆ (ರಾಜ್ಯ ಶಿಷ್ಟಾಚಾರ) ಆದೇಶವನ್ನು ಹೊರಡಿಸಿದ್ದಾರೆ. ಆಗಸ್ಟ್ 27ರ ಮಂಗಳವಾರದ ಸದರಿ ದಿನಾಂಕವನ್ನು ಸಾರ್ವತ್ರಿಕ ರಜೆಯನ್ನಾಗಿ Negotiable Instrument Act 1881ರ ಅಡಿಯಲ್ಲಿ ಘೋಷಿಸಲಾಗಿದೆ ಎಂದು ಹೇಳಿದ್ದಾರೆ.
ಆದೇಶದ ವಿವರ:-
2023-24ನೇ ಸಾಲಿನ ಗೆಜೆಟೆಡ್ ಪ್ರೊಬೇಷನರ್ಸ್ ಗ್ರೂಪ್ ‘ಎ’ ಮತ್ತು ಗ್ರೂಪ್ ‘ಬಿ’ ವೃಂದದ ಹುದ್ದೆಗಳ ನೇಮಕಾತಿಯ ಪೂರ್ವಭಾವಿ ಪರೀಕ್ಷೆಯನ್ನು 27/08/2024ರ ಮಂಗಳವಾರದಂದು ನಡೆಸಲು ಕರ್ನಾಟಕ ಲೋಕಸೇವಾ ಆಯೋಗವು ತೀರ್ಮಾನಿಸಿರುವ ಹಿನ್ನೆಲೆಯಲ್ಲಿ, ಸದರಿ ಪರೀಕ್ಷೆಗೆ ಅನುವಾಗುವ 214 ಸರ್ಕಾರಿ, 189 ಅನುದಾನಿತ ಮತ್ತು 161 ಶಾಸಗಿ ಶಾಲಾ-ಕಾಲೇಜುಗಳು ಸೇರಿದಂತೆ, ಒಟ್ಟಾರೆ 564 ಪರೀಕ್ಷಾ ಉಪ ಕೇಂದ್ರಗಳಿಗೆ, ಅನ್ವಯಿಸಿದಂತೆ ಒಂದು ದಿನದ (ದಿನಾಂಕ 27/08/2024) ವಿಶೇಷ ಸಾರ್ವತ್ರಿಕ ರಜೆಯನ್ನು ಘೋಷಿಸಲಾಗಿದೆ.
ಮೇಲೆ ತಿಳಿಸಿರುವ ಪರೀಕ್ಷಾ ಉಪ ಕೇಂದ್ರಗಳಲ್ಲಿ ದಿನಾಂಕ 27/08/2024ರಂದು ಯಾವುದೇ ಶೈಕ್ಷಣಿಕ ಪರೀಕ್ಷೆಗಳು ಹಾಗೂ ಇನ್ನಿತರೆ ಪೂರ್ವನಿರ್ಧರಿತ ಕಾರ್ಯಕ್ರಮಗಳು ನಿಗದಿಯಾಗಿದ್ದಲ್ಲಿ, ಸೂಕ್ತ ಕ್ರಮಕೈಗೊಂಡು ಪ್ರಸಕ್ತ ಸಾಲಿನ ಗೆಜೆಟೆಡ್ ಪ್ರೊಬೇಷನರ್ಸ್ ಪೂರ್ವಭಾವಿ ಪರೀಕ್ಷೆ ನಡೆಸಲು ಅಡಚಣೆಯಾಗದಿರುವುದನ್ನು ಸಂಬಂಧಿತ ಶೈಕ್ಷಣಿಕ ಸಂಸ್ಥೆಗಳ ಮುಖ್ಯಸ್ಥರು/ ಆಡಳಿತ ಮಂಡಳಿಯು ಖಾತರಿ ಪಡಿಸುವುದು.
ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು, ಪ್ರಾಥಮಿಕ, ಪ್ರೌಢಶಿಕ್ಷಣ ಹಾಗೂ ಪದವಿಪೂರ್ವ ಇಲಾಖೆ ಹಾಗೂ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು, ಉನ್ನತ ಶಿಕ್ಷಣ ಇಲಾಖೆ ಅಡಿಯಲ್ಲಿ ಬರುವಂತಹ ಶೈಕ್ಷಣಿಕ ಸಂಸ್ಥೆಗಳಿಗೆ ಈ ಆದೇಶವನ್ನು ಅನುಷ್ಠಾನಗೊಳಿಸಲು ಸೂಕ್ತ ನಿರ್ದೇಶನ ನೀಡುವುದು. ಸಂಬಂಧಪಟ್ಟ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಸದರಿ ಪರೀಕ್ಷೆಯನ್ನು ಯಾವುದೇ ಅಡಚಣೆ ಉಂಟಾಗದಂತೆ ಪಾರದರ್ಶಕವಾಗಿ ಮತ್ತು ಸುಸೂತ್ರವಾಗಿ ನಡೆಸಲು ಸಂಪೂರ್ಣ ಸಹಕಾರ ನೀಡುವುದು ಎಂದು ಆದೇಶ ಹೇಳಿದೆ.
ಮೇಲೆ ತಿಳಿಸಿರುವ ಪರೀಕ್ಷೆಗೆ ಅರ್ಜಿ ಸಲ್ಲಿಸಿರುವ ರಾಜ್ಯ ಸರ್ಕಾರದ, ಶಾಲಾ ಕಾಲೇಜುಗಳ (ಅನುದಾನಿತ ಶಿಕ್ಷಣ ಸಂಸ್ಥೆಗಳು ಒಳಗೊಂಡಂತೆ) ಹಾಗೂ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳ ಸೇವಾ ನಿರತ ಅಭ್ಯರ್ಥಿಗಳು, ಅವರುಗಳ ಪರೀಕ್ಷಾ ಪ್ರವೇಶ ಪತ್ರವನ್ನು ರಜಾ ಮಂಜೂರು ಮಾಡುವ ಸಂಬಂಧಿತ ಪ್ರಾಧಿಕಾರಕ್ಕೆ ಕಡ್ಡಾಯವಾಗಿ ಒದಗಿಸುವ ಷರತ್ತಿಗೊಳಪಟ್ಟು, ಒಂದು ದಿನದ ವಿಶೇಷ ಸಾಂದರ್ಭಿಕ ರಜೆಯನ್ನು (ದಿನಾಂಕ 27/08/2024ರಂದು) ನೀಡಲು ಆದೇಶಿಸಿದೆ ಎಂದು ತಿಳಿಸಿದೆ.
ಕೆಪಿಎಸ್‌ಸಿ ಗೆಜೆಟೆಡ್ ಪ್ರೊಬೇಷನರ್ಸ್ 384 ಹುದ್ದೆ (ಕೆಎಎಸ್) ನೇಮಕಾತಿ ಪ್ರಕ್ರಿಯೆಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಕೆ ಮಾಡಿತ್ತು. ಅರ್ಜಿ ಸಲ್ಲಿಕೆ ಪ್ರಕ್ರಿಯೆ ಮುಕ್ತಾಯಗೊಂಡಿದ್ದು, ಪೂರ್ವಭಾವಿ ಪರೀಕ್ಷೆಯ ಹಂತಕ್ಕೆ ನೇಮಕಾತಿ ಪ್ರಕ್ರಿಯೆ ಸದ್ಯಕ್ಕೆ ತಲುಪಿದೆ.
ಲೋಕಸೇವಾ ಆಯೋಗವೇ ನೀಡಿರುವ ಮಾಹಿತಿಯಂತೆ 384 ಹುದ್ದೆಗಳಿಗೆ ಒಟ್ಟು 2,10,910 ಅರ್ಜಿಗಳು ಸಲ್ಲಿಕೆಯಾಗಿವೆ. ಆಗಸ್ಟ್ 27ರಂದು ಪೂರ್ವಭಾವಿ ಪರೀಕ್ಷೆ ನಿಗದಿತ ಕೇಂದ್ರಗಳಲ್ಲಿ ನಡೆಯಲಿದೆ. ಆಗಸ್ಟ್ 15ರಿಂದ ಅಭ್ಯರ್ಥಿಗಳು ಕೆಪಿಎಸ್‌ಸಿ ವೆಬ್‌ಸೈಟ್‌ಗೆ ಭೇಟಿ ನೀಡಿ ಹಾಲ್ ಟಿಕೆಟ್‌ಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು.
ಈ ಮೊದಲು ಕೆಪಿಎಸ್‌ಸಿ 2023-24, ಸಾಲಿನ ಗೆಜೆಟೆಡ್ ಪ್ರೊಬೇಷನರ್ಸ್ ‘ಎ’ ಮತ್ತು ‘ಬಿ’ ವೃಂದದ ಒಟ್ಟು 384 ಹುದ್ದೆಗಳ ನೇಮಕಾತಿಗೆ ಪೂರ್ವಭಾವಿ ಪರೀಕ್ಷೆಯನ್ನು ದಿನಾಂಕ 25/08/2024ರಂದು ನಡೆಸಲು ವೇಳಾಪಟ್ಟಿ ಪ್ರಕಟಿಸಿತ್ತು. ಆದರೆ ಅಂದು ಐ. ಬಿ. ಪಿ. ಎಸ್ ಪರೀಕ್ಷೆ ನಿಗದಿಯಾಗಿರುವ ಹಿನ್ನೆಲೆಯಲ್ಲಿ ಪರೀಕ್ಷೆ ಮುಂದೂಡಬೇಕು ಎಂದು ಒತ್ತಾಯಿಸಲಾಗಿತ್ತು.
ಈ ಬಗ್ಗೆ ಆಯೋಗದ ಸಭೆಯಲ್ಲಿ ಚರ್ಚಿಸಿ, ಸದರಿ ಪೂರ್ವಭಾವಿ ಪರೀಕ್ಷೆಗೆ ಈಗಾಗಲೇ ಎಲ್ಲಾ ಪೂರ್ವಸಿದ್ಧತೆಗಳನ್ನು ಮಾಡಿಕೊಂಡಿರುವ ಕಾರಣದಿಂದ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಆಯೋಗದೊಂದಿಗೆ ಸಮಾಲೋಚಿಸಿ ಅಲ್ಪಕಾಲ ಪರೀಕ್ಷೆಯನ್ನು ಮುಂದೂಡಲು ತಿಳಿಸಿರುವ ಹಿನ್ನೆಲೆಯಲ್ಲಿ ದಿನಾಂಕ 27/08/2024ರ ಮಂಗಳವಾರದಂದು ಪೂರ್ವಭಾವಿ ಪರೀಕ್ಷೆ ನಡೆಸಲು ಆಯೋಗವು ತೀರ್ಮಾನ ಕೈಗೊಂಡಿದೆ.