Government of Karnataka: ಕನಿಷ್ಠ ವೇತನ ಏರಿಕೆ ಮಾಡಲಿದೆ ಕರ್ನಾಟಕ ಸರ್ಕಾರ, ಯಾರಿಗೆ ಲಾಭ-2025.
Government of Karnataka:ಮಹತ್ವದ ಬೆಳವಣಿಗೆಯೊಂದರಲ್ಲಿ ಕರ್ನಾಟಕ ಸರ್ಕಾರ(Government of Karnataka) ಕನಿಷ್ಠ ವೇತನವನ್ನು ಹೆಚ್ಚಿಗೆ ಮಾಡಲಿದೆ. ಈ ತೀರ್ಮಾನದಿಂದಾಗಿ ಸಂಘಟಿತ ಹಾಗೂ ಅಸಂಘಟಿತ ವಲಯಗಳಲ್ಲಿ ಕಾರ್ಯ ನಿರ್ವಹಣೆ ಮಾಡುವ ಅಂದಾಜು 2 ಕೋಟಿ ಉದ್ಯೋಗಿಗಳಿಗೆ ಹೆಚ್ಚು ಲಾಭವಾಗಲಿದೆ. ರಾಜ್ಯ ಸರ್ಕಾರ ಪ್ರತಿ 5 ವರ್ಷಗಳಿಗೊಮ್ಮೆ ಕನಿಷ್ಠ ವೇತನವನ್ನು ಪರಿಷ್ಕರಣೆ ಮಾಡುತ್ತಾ ಬಂದಿದ್ದು, ಕಾರ್ಮಿಕರಿಗೆ ಅನುಕೂಲತೆ ಮಾಡಿಕೊಡುತ್ತಿದೆ.
ಸದ್ಯ ಕರ್ನಾಟಕದಲ್ಲಿ ಕನಿಷ್ಠ ವೇತನ 15,000 ರೂ. ಇದೆ. ಸರ್ಕಾರ ಕನಿಷ್ಠ ವೇತನ ಹೆಚ್ಚಳ ಮಾಡುವ ಕುರಿತು ತೀರ್ಮಾನ ಕೈಗೊಂಡು, ನಿಯಮದಲ್ಲಿ ಬದಲಾವಣೆ ಮಾಡಿದ ಬಳಿಕ ಕೌಶಲ್ಯ ರಹಿತ ಕಾರ್ಮಿಕರು ಪ್ರತಿ ತಿಂಗಳು 20,000 ರೂ. ಕನಿಷ್ಠ ವೇತನವನ್ನು ಪಡೆಯಲಿದ್ದಾರೆ. ಈ ಕುರಿತು ನಿಯಮ ಬದಲಾವಣೆ ಮಾಡಲು ಕಾರ್ಮಿಕ ಇಲಾಖೆ ಚಿಂತನೆ ನಡೆಸಿದೆ.
ಕನಿಷ್ಠ ವೇತನ ಏರಿಕೆ.
ಕನಿಷ್ಠ ವೇತನ ಪರಿಷ್ಕಣೆಯಿಂದ ಸಂಘಟಿತ ವಲಯದಲ್ಲಿ ಕೆಲಸ ಮಾಡುವ 53 ರಿಂದ 54 ಲಕ್ಷ ಉದ್ಯೋಗಿಗಳು, ಅಸಂಘಟಿತ ವಲಯದ 1.5 ಕೋಟಿ ಉದ್ಯೋಗಿಗಳಿಗೆ ಲಾಭವಾಗಲಿದೆ ಎಂದು ಅಂದಾಜಿಸಲಾಗಿದೆ. ಪ್ರಸ್ತುತದ ಜೀವನಮಟ್ಟವನ್ನು ಗಮನದಲ್ಲಿಟ್ಟುಕೊಂಡು ಈ ಕನಿಷ್ಠ ವೇತನ ನಿಗದಿಯ ತೀರ್ಮಾನವನ್ನು ಸರ್ಕಾರ ಕೈಗೊಳ್ಳಲಿದೆ.
ಉದ್ಯೋಗಿಗಳನ್ನು ಕೌಶಲ್ಯ ರಹಿತ ಕಾರ್ಮಿಕರು, ಅರೆ ಕೌಶಲ್ಯ ಹೊಂದಿದವರು, ಕೌಶಲ್ಯ ಹೊಂದಿದವರು, ಉತ್ತಮ ಕೌಶಲ್ಯ ಹೊಂದಿದವರು ಎಂದು ವಿಭಾಗ ಮಾಡಲಾಗಿದೆ. ಸದ್ಯ ಈ ವಿಭಾಗದ ಕಾರ್ಮಿಕರ ನಡುವೆ ಶೇ 10ರಷ್ಟು ವೇತನ ವ್ಯತ್ಯಾಸವಿದೆ. ಸುಪ್ರೀಂಕೋರ್ಟ್ ಮಾರ್ಗಸೂಚಿಗಳ ಅನ್ವಯ ಕಾರ್ಮಿಕನ ಆರ್ಥಿಕ ಸ್ಥಿತಿಯನ್ನು ಪರಿಗಣನೆ ಮಾಡದೇ ಅವರಿಗೆ ಕನಿಷ್ಠ ವೇತನವನ್ನು ನೀಡಬೇಕಿದೆ.
ಸುಪ್ರೀಂಕೋರ್ಟ್ ತನ್ನ ಐತಿಹಾಸಿಕ ತೀರ್ಪಿನಲ್ಲಿ ಕನಿಷ್ಠ ವೇತನ ನಿಗದಿ ಕುರಿತು ವಿವರಣೆ ನೀಡಿದೆ. ಕಾರ್ಮಿಕ ಸಚಿವ ಸಂತೋಷ್ ಲಾಡ್ ಈಗಾಗಲೇ ಇಲಾಖೆಯ ಅಧಿಕಾರಿಗಳ ಜೊತೆ ಕನಿಷ್ಠ ವೇತನ ಪರಿಷ್ಕರಣೆ ಕುರಿತು ಮಹತ್ವದ ಸಭೆಗಳನ್ನು ನಡೆಸಿದ್ದಾರೆ. ಸುಪ್ರೀಂಕೋರ್ಟ್ ಆದೇಶದ ಅನ್ವಯ ವೇತನ ನಿಗದಿ ಮಾಡಲು ನಾವು ಬದ್ಧರಾಗಿದ್ದೇವೆ ಎಂದು ಸಚಿವರು ತಿಳಿಸಿದ್ದಾರೆ.
ಅಸಂಘಟಿತ ವಲಯದಲ್ಲಿ ಕಾರ್ಯ ನಿರ್ವಹಣೆ ಮಾಡುವ ಎಲ್ಲಾ 83 ವರ್ಗದ ನೌಕರರ ಕನಿಷ್ಠ ವೇತನವನ್ನು ಪರಿಷ್ಕರಣೆ ಮಾಡಲು ಸರ್ಕಾರ ಚಿಂತನೆ ನಡೆಸಿದೆ. ಈ ನಿಯಮ ಜಾರಿಗೆ ಬಂದರೆ ಕೌಶಲ್ಯಗಳ ಆಧಾರದ ಮೇಲೆ ಎಲ್ಲಾ 4 ವಿಭಾಗದ ಕಾರ್ಮಿಕರಿಗೂ ವೇತನ ಏರಿಕೆಯಾಗಲಿದೆ.
ಸರ್ಕಾರದ ಈ ತೀರ್ಮಾನದ ಕುರಿತು AITUC ಪ್ರತಿಕ್ರಿಯೆ ನೀಡಿದೆ, ನಾವು ಸರ್ಕಾರದ ತೀರ್ಮಾನವನ್ನು ಸ್ವಾಗತ ಮಾಡುತ್ತೇವೆ. ಇದರಿಂದಾಗಿ ನೌಕರರ ವೇತನ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಲಿದೆ. ಇದನ್ನು ಜಾರಿಗೊಳಿಸುವಲ್ಲಿ ವಿಳಂಬವಾದರೆ ನಾವು ಹೋರಾಟ ಮಾಡಲಿದ್ದೇವೆ ಎಂದು ಹೇಳಿದ್ದಾರೆ.
2022ರಲ್ಲಿ ಅಧಿಕಾರದಲ್ಲಿದ್ದ BJP ಸರ್ಕಾರ ಕನಿಷ್ಠ ವೇತನವನ್ನು ಶೇ 5 ರಿಂದ 10ರಷ್ಟು ಏರಿಕೆ ಮಾಡಲು ಮುಂದಾಗಿತ್ತು. ಹಾಗ AITUC ಈ ಕುರಿತು ಕರ್ನಾಟಕ ಹೈಕೋರ್ಟ್ ಮೊರೆ ಹೋಗಿತ್ತು. ಸುಪ್ರೀಂಕೋರ್ಟ್ ತೀರ್ಪಿನ ಅನ್ವಯ ಕನಿಷ್ಠ ವೇತನ ನಿಗದಿ ಮಾಡಲು ನಿರ್ದೇಶನ ನೀಡಬೇಕು ಎಂದು ಮನವಿ ಸಲ್ಲಿಕೆ ಮಾಡಿತ್ತು.
ಹೈಕೋರ್ಟ್‌ನ ಏಕಸದಸ್ಯ ಪೀಠದಲ್ಲಿ AITUCಗೆ ಗೆಲುವು ಸಿಕ್ಕಿತ್ತು. ಆದರೆ ಇದನ್ನು ಪ್ರಶ್ನಿಸಿ ಉದ್ಯೋಗದಾತರು ವಿಭಾಗೀಯ ಪೀಠದ ಮುಂದೆ ಅರ್ಜಿ ಸಲ್ಲಿಕೆ ಮಾಡಿದ್ದರು. ಈಗ ಉದ್ಯೋಗದಾತರ ಅರ್ಜಿ ಏಕಸದಸ್ಯ ಪೀಠದ ಮುಂದೆ ಬಂದಿದೆ. ಇಂತಹ ಸಮಯದಲ್ಲಿಯೇ ಸರ್ಕಾರ ಕನಿಷ್ಠ ವೇತನ ಪರಿಷ್ಕರಣೆ ಕುರಿತು ಗಮನಹರಿಸಿದೆ.