ಮಹಾವೀರ(Mahavira)ಜಯಂತಿ: ಜೈನಧರ್ಮ ವರ್ಧಮಾನ ಮಹಾವೀರ(Mahavira) ಸಾಶಪೂ. 599-527|ಜಯಂತಿ.
ಮಹಾವೀರ(Mahavira)ಜಯಂತಿ:ಜೈನ ಧರ್ಮವು ಭಾರತದ ಅತ್ಯಂತ ಪ್ರಾಚೀನ ಧರ್ಮಗಳಲ್ಲಿ ಒಂದಾಗಿದೆ. ಈ ಧರ್ಮದಲ್ಲಿ 24 ತೀರ್ಥಂಕರರಿದ್ದಾರೆಂದು ಮತ್ತು ಮೊದಲ ತೀರ್ಥಂಕರನಾದ ವೃಷಭನಾಥನು ಜೈನ ಧರ್ಮವನ್ನು ಸ್ಥಾಪಿಸಿದನೆಂದು ಜೈನರು ನಂಬುತ್ತಾರೆ. 23ನೇ ತೀರ್ಥಂಕರ ಪಾರ್ಶ್ವನಾಥ ಮತ್ತು 24ನೇ ತೀರ್ಥಂಕರ ಮಹಾವೀರರಾಗಿರುತ್ತಾರೆ. ‘ಸ್ವಸ್ತಿಕ್’ ಜೈನ ಧರ್ಮದ ಪವಿತ್ರ ಚಿಹ್ನೆಯಾಗಿದೆ.
ಪಾರ್ಶ್ವನಾಥ 30ನೇ ವಯಸ್ಸಿಗೆ ಪರಮ ಜ್ಞಾನ ಪಡೆದುಕೊಂಡನು. ಅವನು ನಾಲ್ಕು ಮಹಾನ್ ತತ್ವಗಳನ್ನು ಬೋಧಿಸಿದನು. ಅವುಗಳೆಂದರೆ:
1. ಅಹಿಂಸೆ.
2. ಸತ್ಯ.
3. ಆಸ್ತೇಯ-ಕಳ್ಳತನಮಾಡದಿರುವುದು.
4. ಅಪರಿಗ್ರಹ- ಅವಶ್ಯಕತೆಗಿಂತ ಹೆಚ್ಚಿನ ಸಂಪತ್ತನ್ನು ಹೊಂದದಿರುವುದು.
ಈ ಬೋಧನೆಗಳು ಜೈನ ಧರ್ಮದ ಮೂಲಭೂತ ತತ್ವಗಳಾಗಿವೆ.
ವರ್ಧಮಾನ ಮಹಾವೀರ Mahavira (ಸಾಶಪೂ 599-527).
• ಆರಂಭಿಕ ಜೀವನ
ವರ್ಧಮಾನನು ವೈಶಾಲಿ ಸಮೀಪದ ಕುಂದಗ್ರಾಮದಲ್ಲಿ ಸಾ.ಶ.ಪೂ 599ರಲ್ಲಿ ಜನಿಸಿದನು. ಅವನ ತಂದೆ ರಾಜ ಸಿದ್ದಾರ್ಥ ಮತ್ತು ತಾಯಿ ರಾಣಿ ತ್ರಿಶಾಲದೇವಿ. ಸಿದ್ದಾರ್ಥನು ಕ್ಷತ್ರಿಯಕುಲವೊಂದರ ಮುಖ್ಯಸ್ಥನಾಗಿದ್ದನು. ವರ್ಧಮಾನ 18ನೇ ವಯಸ್ಸಿನಲ್ಲಿ ರಾಜಕುಮಾರಿ ಯಶೋಧಳನ್ನು ವಿವಾಹವಾದನು. ಅವನಿಗೆ ಅನೊಜ್ಜ ಅಥವಾ ಪ್ರಿಯದರ್ಶಿನಿ ಎಂಬ ಮಗಳಿದ್ದಳು. ತನ್ನ ತಂದೆ ತಾಯಿಯರ ಆಕಸ್ಮಿಕ ಮರಣದಿಂದ ವರ್ಧಮಾನ ಉಡುಪನ್ನೂ ಸೇರಿದಂತೆ ಪ್ರಾಪಂಚಿಕ ಸುಖಭೋಗಗಳನ್ನು ತ್ಯಜಿಸಿದನು. ಅವನು ಸನ್ಯಾಸಿಯಾಗಿ ಜೀವನದ ಸತ್ಯವನ್ನರಸುತ್ತಾ ಸಂಚಾರ ಹೊರಟನು. ಅವನು 13 ವರ್ಷಗಳ ಕಾಲ ಸ್ವದೇಹ ದಂಡನೆ ಮತ್ತು ಆಳವಾದ ಧ್ಯಾನ ಮಾಡುತ್ತಾ ಜೀವನ ನಡೆಸಿದನು. ವೈಶಾಖದ ಹತ್ತನೇ ದಿನ ಬಿಹಾರದ ಜೃಂಭಿಕಾ ಗ್ರಾಮದಲ್ಲಿ ವರ್ಧಮಾನನಿಗೆ ಜ್ಞಾನೋದಯವಾಯಿತು. ಅವನು ‘ಕೈವಲ್ಯ’ ಎಂಬ ಅತ್ಯುನ್ನತ ಆಧ್ಯಾತ್ಮಿಕ ಜ್ಞಾನವನ್ನು ಪಡೆದನು ಮತ್ತು ‘ಕೇವಲಿನ್’ (ಸರ್ವಜ್ಞ) ಅಥವಾ ‘ಜಿನ’ (ಇಂದ್ರಿಯ ನಿಗ್ರಹಿಸಿದವನು) ನಾದನು. ತದನಂತರ ವರ್ಧಮಾನ ಮಹಾವೀರ(Mahavira) ನೆಂದು ಕರೆಯಲ್ಪಟ್ಟನು. ಮುಂದಿನ 30 ವರ್ಷಗಳ ಕಾಲ ಕೋಸಲ, ಮಗಧ, ವಿದೇಹ ಮತ್ತು ಅಂಗಗಳಲ್ಲಿ ಜೈನಧರ್ಮದ ತತ್ವಗಳನ್ನು ಬೋಧಿಸುತ್ತಾ ಪ್ರವಾಸ ಕೈಗೊಂಡನು. ತನ್ನ 72ನೇ ವಯಸ್ಸಿನಲ್ಲಿ ದಕ್ಷಿಣ ಬಿಹಾರದ ರಾಜಗೃಹ ಸಮೀಪದ ಪಾವಾ ಎಂಬಲ್ಲಿ ಸಾಶಪೂ 527ರಲ್ಲಿ ನಿರ್ವಾಣಹೊಂದಿದನು.
ಮಹಾವೀರನು(Mahavira) ಗೌತಮ ಬುದ್ಧನ ಸಮಾಕಾಲೀನನಾಗಿದ್ದನು. ಆದರೆ ಅವರಿಬ್ಬರು ಪರಸ್ಪರ ಒಬ್ಬರನ್ನೊಬ್ಬರು ಯಾವಾಗಲೂ ಭೇಟಿಯಾಗಲಿಲ್ಲ. ಪುರುಷ ಮತ್ತು ಮಹಿಳೆಯರಿಬ್ಬರಿಗೂ ಮುಕ್ತವಾಗಿದ್ದ ಧಾರ್ಮಿಕ ವ್ಯವಸ್ಥೆಯೊಂದನ್ನು ಸ್ಥಾಪಿಸಿದನು. ಇವನು ಪಾರ್ಶ್ವನಾಥನ ತತ್ವಗಳನ್ನು ಜೈನ ಧರ್ಮದ ಮೂಲ ಎಂದು ಸ್ವೀಕರಿಸಿದನು.
ಮಹಾವೀರನ(Mahavira) ಬೋಧನೆಗಳು.
ಮಹಾವೀರ ಮೋಕ್ಷ ಸಾಧನೆಗಾಗಿ ಪಂಚಶೀಲ ತತ್ವಗಳನ್ನು ಮತ್ತು ತ್ರಿರತ್ನಗಳನ್ನು ಬೋಧಿಸಿದನು.
• ಪಂಚಶೀಲ ತತ್ವಗಳು.
1) ಸತ್ಯ
2) ಅಹಿಂಸೆ
3 ಆಸ್ತೇಯ – ಕಳ್ಳತನ ಮಾಡದಿರುವುದು.
4) ಅಪರಿಗ್ರಹ- ಅವಶ್ಯಕತೆಗಿಂತ ಹೆಚ್ಚಿನ ಸಂಪತ್ತನ್ನು ಹೊಂದದಿರುವುದು.
5) ಬ್ರಹ್ಮಚರ್ಯ-ಪಾವಿತ್ರ್ಯತೆ.
• ತ್ರಿರತ್ನಗಳು.
1. ಸಮ್ಯಕ್ ಜ್ಞಾನ
2. ಸಮ್ಯಕ್ ನಂಬಿಕೆ
3. ಸಮ್ಯಕ್ ನಡತೆ
ಮಹಾವೀರನಿಗೆ ದೇವರ ಅಸ್ತಿತ್ವದಲ್ಲಿ ನಂಬಿಕೆ ಇರಲಿಲ್ಲ. ಆದರೆ ಆತ್ಮದ ಅಸ್ತಿತ್ವದಲ್ಲಿ ನಂಬಿಕೆ ಇಟ್ಟಿದ್ದನು. ಇವನು ಜಾತಿಪದ್ಧತಿ ಮತ್ತು ಪ್ರಾಣಿಬಲಿಗಳನ್ನು ಖಂಡಿಸಿದನು. ಇವನು ಅಹಿಂಸೆಗೆ ಹೆಚ್ಚು ಒತ್ತು ಕೊಟ್ಟನು ಮತ್ತು ಪ್ರಾಣಿ-ಪಕ್ಷಿ, ಗಿಡ-ಮರ, ಕಲ್ಲು-ಮಣ್ಣು, ನೀರು-ಬೆಂಕಿ, ಮುಂತಾದವು ಸಹ ಜೀವ ಹೊಂದಿರುವುದರಿಂದ ಯಾವುದೇ ಜೀವಾತ್ಮಗಳಿಗೆ ಹಿಂಸೆ ನೀಡಬಾರದೆಂದು ಪ್ರತಿಪಾದಿಸಿದನು. ಇವನು ನಿರ್ವಾಣಕ್ಕಾಗಿ ಅಥವಾ ಮೋಕ್ಷ ಸಾಧನೆಗಾಗಿ ಸನ್ಯಾಸತ್ವ ಮತ್ತು ಕಠಿಣ ತಪಸ್ಸನ್ನು ಪ್ರತಿಪಾದಿಸಿದನು. ಇವನಿಗೆ ಗಣಾಧರರೆಂಬ ಹನ್ನೊಂದು ಜನ ಶಿಷ್ಯರಿದ್ದರು.
ವರ್ಧಮಾನ ಮಹಾವೀರ(Mahavira) ಜೈನ ಧರ್ಮದ ಪ್ರಚಾರ.
ಆರಂಭದಲ್ಲಿ ಜೈನಧರ್ಮವು ಕೋಸಲ, ಮಗಧ, ವಿದೇಹ ಮತ್ತು ಅಂಗ ರಾಜ್ಯಗಳಿಗೆ ಸೀಮಿತವಾಗಿತ್ತು. ಅಜಾತಶತೃ, ಬಿಂಬಿಸಾರ, ಚಂದ್ರಗುಪ್ತ ಮೌರ್ಯ, ಮುಂತಾದ ರಾಜರು ನೀಡಿದ ಪ್ರೋತ್ಸಾಹದಿಂದಾಗಿ ಭಾರತದಾದ್ಯಂತ ಪ್ರಸಾರವಾಯಿತು. ಚಂದ್ರಗುಪ್ತಮೌರ್ಯನ ಕೊನೆಯ ಕಾಲದಲ್ಲಿ, ಉತ್ತರಭಾರತದಲ್ಲಿ ಕ್ಷಾಮ ಉಂಟಾಯಿತು. ಚಂದ್ರಗುಪ್ತಮೌರ್ಯನು ಭದ್ರಬಾಹುವಿನ ಜೊತೆ ಶ್ರವಣಬೆಳಗೊಳಕ್ಕೆ ವಲಸೆ ಬಂದನು. ಅವನು ಚಂದ್ರಗಿರಿ ಬೆಟ್ಟದ ಮೇಲೆ ನೆಲೆಸಿ ಸಲ್ಲೇಖನ ವ್ರತವನ್ನಾಚರಿಸಿ ಸಾವನ್ನಪ್ಪಿದನು. ನಂತರ ಕದಂಬರು, ಗಂಗರು, ಚಾಲುಕ್ಯರು ಮತ್ತು ರಾಷ್ಟ್ರಕೂಟರು ಜೈನಧರ್ಮಕ್ಕೆ ಆಶ್ರಯ ನೀಡಿದರು. ಆದ್ದರಿಂದ ಭಾರತದ ಇತರ ಭಾಗಗಳಾದ ಕರ್ನಾಟಕ, ಗುಜರಾತ್ ಮತ್ತು ರಾಜಸ್ಥಾನಗಳಲ್ಲೂ ಜೈನಧರ್ಮ ಪ್ರಸಾರವಾಯಿತು.
ಜೈನ ಧರ್ಮದ 2 ಸಭೆಗಳು.
1.ಮೊದಲ ಸಭೆ:- ಸಾಶಪೂ 300ರಲ್ಲಿ ಪಾಟಲಿಪುತ್ರದಲ್ಲಿ ಜರುಗಿತು. ಜೈನಧರ್ಮದ ಪವಿತ್ರ ಗ್ರಂಥಗಳನ್ನು ಸಂಗ್ರಹಿಸಿ, ಜ್ಞಾನವನ್ನು ಪುನರುಜ್ಜಿವನಗೊಳಿಸುವುದು ಇದರ ಉದ್ದೇಶವಾಗಿತ್ತು.
2.ಎರಡನೆಯ ಸಭೆ:- ಸಾಶ 512 ಸುಮಾರಿನಲ್ಲಿ ಗುಜರಾತಿನ ವಲ್ಲಭಿಯಲ್ಲಿ ಜರುಗಿತು. ಇಲ್ಲಿ ಜೈನ ಧರ್ಮದ ಪವಿತ್ರ ಗ್ರಂಥಗಳನ್ನು ಸಂಗ್ರಹಿಸಿ, ಅವುಗಳನ್ನು ಕ್ರಮಬದ್ಧವಾಗಿ ಬರೆಯಲಾಯಿತು.
ಜೈನಧರ್ಮದ ಪಂಗಡಗಳು.
ಜೈನಧರ್ಮದ ಅನುಯಾಯಿಗಳಲ್ಲಿನ ಭಿನ್ನಾಭಿಪ್ರಾಯಗಳಿಂದಾಗಿ ಜೈನಧರ್ಮ ಇಬ್ಬಾಗವಾಯಿತು.
1) ಶ್ವೇತಾಂಬರರು:- ಪಾರ್ಶ್ವನಾಥನ ಅನುಯಾಯಿಗಳಾದ ಇವರು ಬಿಳಿಯ ವಸ್ತ್ರಧಾರಿಗಳು.
2) ದಿಗಂಬರರು:- ಮಹಾವೀರನ ಅನುಯಾಯಿಗಳಾದ ಇವರು ನಿರ್ವಸ್ತ್ರಧಾರಿಗಳು.
• ಜೈನ ಸಾಹಿತ್ಯ.
ಆಗಮ ಸಿದ್ಧಾಂತ ಜೈನರ ಪವಿತ್ರ ಗ್ರಂಥ. ಇದರಲ್ಲಿ 45 ರಿಂದ 50 ಸಂಪುಟಗಳಿವೆ. ಮಹಾವೀರನ ಮೂಲ ತತ್ವಗಳನ್ನೊಳಗೊಂಡ ಸಿದ್ದಾಂತ ‘ಪೂರ್ವ’ಗಳನ್ನು 14 ಗ್ರಂಥಗಳಲ್ಲಿ ಸಂಗ್ರಹಿಸಲಾಗಿದೆ. ಶ್ವೇತಾಂಬರ ಮತ್ತು ದಿಗಂಬರರಿಬ್ಬರೂ 12 ‘ಅಂಗ’ಗಳನ್ನು ಮೊದಲ ಮತ್ತು ಪ್ರಧಾನ ಧಾರ್ಮಿಕ ಗ್ರಂಥಗಳೆಂದು ಒಪ್ಪಿಕೊಂಡಿದ್ದಾರೆ. ಜೈನ ಪಂಡಿತರು ಧಾರ್ಮಿಕ ಮತ್ತು ಲೌಕಿಕ ಕೃತಿಗಳನ್ನು ಬರೆದಿದ್ದಾರೆ. ಅವರು ಕನ್ನಡ ಸಾಹಿತ್ಯವನ್ನೂ ಶ್ರೀಮಂತಗೊಳಿಸಿದ್ದಾರೆ.
ಕಲೆ ಮತ್ತು ವಾಸ್ತುಶಿಲ್ಪಕ್ಕೆ ಜೈನ ಧರ್ಮದ ಕೊಡುಗೆ.
ಕಲೆ ಮತ್ತು ವಾಸ್ತುಶಿಲ್ಪ ಬೆಳವಣಿಗೆಗೆ ಜೈನ ಧರ್ಮ ಸಹಾಯಕವಾಯಿತು. ಜೈನರು ಗುಹಾಲಯಗಳನ್ನು ಸನ್ಯಾಸಿಗಳ ವಾಸಕ್ಕಾಗಿ ನಿರ್ಮಿಸಿದರು (ಭಿಕ್ಷುಗೃಹಗಳು). ಅವರ ಕೆಲವು ಪ್ರಮುಖ ಕೊಡುಗೆಗಳೆಂದರೆ:
1) ಉದಯಗಿರಿಯ ಹುಲಿಯ ಗುಹೆ
2) ಎಲ್ಲೋರಾದ ಇಂದ್ರಸಭಾ ಗುಹೆ.
3) ಒರಿಸ್ಸಾದ ಹಥಿಗುಂಪಾ ಗುಹೆ, ಮುಂತಾದವು.
ಶ್ರವಣಬೆಳಗೊಳದ ಜಗದ್ವಿಖ್ಯಾತ ಗೊಮ್ಮಟೇಶ್ವರ ವಿಗ್ರಹ ಮತ್ತು ಮೂಡಬಿದ್ರೆಯ ಸಹಸ್ರ ಕಂಬಗಳ ಬಸದಿ ಕರ್ನಾಟಕದಲ್ಲಿನ ಗಮನಾರ್ಹ ಸ್ಮಾರಕಗಳಾಗಿವೆ.