2023-24 ನೇ ಸಾಲಿನ ಗೆಜೆಟೆಡ್ ಪ್ರೋಬೆಷನರಿ ಗ್ರೂಪ್ ‘ ಎ’ ಮತ್ತು ‘ಬಿ’ ವೃಂದದ 384 ಹುದ್ದೆಗಳ ನೇಮಕಕ್ಕೆ ಮೇ 5ರಂದು ನಿಗದಿ ಪಡಿಸಿದ್ದ ಪೂರ್ವಭಾವಿ ಪರೀಕ್ಷೆಯನ್ನು ಜುಲೈ 7 ಕ್ಕೆ ಮುಂದೂಡಿರುವ ಕರ್ನಾಟಕ ಲೋಕಸೇವಾ ಆಯೋಗ, ಅರ್ಜಿ ಸಲ್ಲಿಸುವ ಅವಧಿಯನ್ನು ಏ.15 ರವರೆಗೆ ವಿಸ್ತರಣೆ ಮಾಡಿದೆ.
ಈ ಮೊದಲು ಹೊರಡಿಸಿದ್ದ ಅಧಿಸೂಚನೆಯಂತೆ ಅರ್ಜಿ ಸಲ್ಲಿಸಲು ಏ.3 ಕಡೆ ದಿನವಾಗಿತ್ತು.ಆದರೆ, ಈ ಚುನಾವಣೆ, ಇತರೆ ಪರೀಕ್ಷೆಗಳ ನಿಗದಿ ಮತ್ತಿತರ ಕಾರಣ ಗಳಿಂದಾಗಿ ಅಭ್ಯರ್ಥಿಗಳಿಗೆ ಅನುಕೂಲವಾಗಲಿ ಎಂಬ ದೃಷ್ಠಿಯಿಂದ ಅವಧಿ ವಿಸ್ತರಣೆ ಮಾಡಿ ಆದೇಶ ಹೊರಡಿಸಿದೆ.
ಅಂತೆಯೇ, ಈ ಮೊದಲು ಪೂರ್ವಭಾವಿ ಪರೀಕ್ಷೆಯನ್ನು ಮೇ 5 ಕ್ಕೆ ನಿಗದಿಪಡಿಸಲಾಗಿತ್ತು. ಹೊಸ ಆದೇಶದ ಪ್ರಕಾರ, ಪೂರ್ವಭಾವಿ ಪರೀಕ್ಷೆಯನ್ನು ಎರಡು ತಿಂಗಳು ಮುಂದೂಡಿ ಜುಲೈ 7ಕ್ಕೆ ನಿಗದಿ ಮಾಡಲಾಗಿದೆ ಎಂದು ಲೋಕಸೇವಾ ಆಯೋಗದ ಕಾರ್ಯದರ್ಶಿ ಡಾ.ಕೆ.ರಾಕೇಶ್ ಕುಮಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಗೆಜೆಟೆಡ್ ಪ್ರೊಬೇಷನರಿ ಗ್ರೂಪ್ ‘ ಎ’ ಮತ್ತು ‘ಬಿ’ ವೃಂದದ 384 ಹುದ್ದೆಗಳ ನೇಮಕಕ್ಕೆ ಫೆ.26 ರಂದು ಅಧಿಸೂಚನೆ ಹೊರಡಿಸಲಾಗಿತ್ತು. ಅದರಲ್ಲಿ 159 ಗ್ರೂಪ್ ಎ ಮತ್ತು 225 ಗ್ರೂಪ್ ಬಿ ಹುದ್ದೆಗಳಿವೆ. ಆ ಅಧಿಸೂಚನೆಯಲ್ಲಿ ಉಳಿಕೆ ಮೂಲ ವೃಂದದ ಮತ್ತು ಹೈದರಾಬಾದ್ ಕರ್ನಾಟಕ ವೃಂದದ ಒಟ್ಟು ಹುದ್ದೆಗಳ ಅಂಕಿ ಅಂಶಗಳ ( ಆರ್ ಪಿ ಸಿ 307 ಮತ್ತು ಹೈ.ಕ 77) ಮತ್ತು ವರ್ಗಿಕರಣದಲ್ಲಿ ವಾಣಿಜ್ಯ ತೆರಿಗೆ ನೀರಿಕ್ಷಕರು ಎಂದು ನಮೂದಾಗಿತ್ತು.
ಅದನ್ನು ಆರ್ ಪಿ ಸಿ 310 ಮತ್ತು ಹೈ.ಕ 74 ಮತ್ತು ವಾಣಿಜ್ಯ ತೆರಿಗೆ ಅಧಿಕಾರಿ ಎಂದು ತಿದ್ದುಪಡಿ ಮಾಡಲು ಮಂಗಳವಾರ ಅಧಿಸೂಚನೆ ಹೊರಡಿಸಲಾಗಿದೆ.ಅಂತೆಯೇ ಆ ಹುದ್ದೆಗಳಿಗೆ ಅಭ್ಯರ್ಥಿಗಳು ಅರ್ಜಿ ಸಲ್ಲಿಕೆ ಅವಧಿಯನ್ನು ಏಪ್ರಿಲ್ 15 ರವರೆಗೆ ವಿಸ್ತರಿಸಲಾಗಿದೆ.ಹೆಚ್ಚಿನ ವಿವರಗಳನ್ನು ಆಯೋಗದ ವೆಬ್ ಸೈಟ್ ನಲ್ಲಿ ಪಡೆಯಬಹುದಾಗಿದೆ.ಎಂದು ಅವರು ಹೇಳಿದ್ದಾರೆ.
ಅಲ್ಲದೆ,ಕರ್ನಾಟಕ ಗೆಜೆಟೆಡ್ ಪ್ರೋಬೇಷನರಿ ( ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ನೇಮಕ) ನಿಯಮಗಳು -1997 ಹಾಗೂ ತಿದ್ದುಪಡಿ ನಿಯಮಗಳನ್ವಯ ಮುಖ್ಯ ಪರೀಕ್ಷೆಯ ಕಡ್ಡಾಯ ಕನ್ನಡ ಮತ್ತು ಕಡ್ಡಾಯ ಇಂಗ್ಲಿಷ್ ಎಂಬ ಎರಡು ಅರ್ಹತಾದಾಯಕ ಪತ್ರಿಕೆಗಳನ್ನು ಒಳಗೊಂಡಿರುತ್ತದೆ.ಆಯೋಗವು ಈ ಹಿಂದೆ ನಡೆಸಿದ ಕಡ್ಡಾಯ ಕನ್ನಡ ಭಾಷಾ ಪರೀಕ್ಷೆಗೆ ಹಾಜರಾಗಿ ಉತ್ತೀರ್ಣರಾಗಿಯೂ ಮೇಲಿನ ನಿಯಮಗಳ ಅನ್ವಯ ಮುಖ್ಯ ಪರೀಕ್ಷೆಗೆ ಅರ್ಹರಾಗುವ ಎಲ್ಲಾ ಅಭ್ಯರ್ಥಿಗಳು ಅರ್ಹತದಾಯಕ ಪತ್ರಿಕೆಗಳನ್ನು ಕಡ್ಡಾಯವಾಗಿ ಬರೆಯಬೇಕಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.