7th Pay Commission: ಸರ್ಕಾರಿ ನೌಕರರ ತರಬೇತಿ ವಿಶೇಷ ಭತ್ಯೆ ಎಷ್ಟು ಏರಿಕೆ ?
7th Pay Commission: ಕರ್ನಾಟಕ ಸರ್ಕಾರ ರಚನೆ ಮಾಡಿದ್ದ ಕೆ. ಸುಧಾಕರ್ ರಾವ್ ನೇತೃತ್ವದ ರಾಜ್ಯ 7ನೇ ವೇತನ ಆಯೋಗ 558 ಪುಟಗಳ ಸಂಪುಟ-1ರ ವರದಿಯನ್ನು ಸರ್ಕಾರಕ್ಕೆ ಸಲ್ಲಿಕೆ ಮಾಡಿದೆ. ಸರ್ಕಾರ ಸಚಿವ ಸಂಪುಟ ಸಭೆಯಲ್ಲಿ ಆಗಸ್ಟ್‌ನಿಂದಲೇ ಜಾರಿಗೆ ಬರುವಂತೆ ವರದಿಯನ್ನು ಜಾರಿಗೊಳಿಸು ಒಪ್ಪಿಗೆ ನೀಡಿದೆ. ವರದಿಯಲ್ಲಿ ಸರ್ಕಾರಿ ನೌಕರರ ವೇತನ ಮಾತ್ರವಲ್ಲ ವಿವಿಧ ಭತ್ಯೆಗಳ ಏರಿಕೆ ಕುರಿತು ವಿವರಣೆ ನೀಡಲಾಗಿದೆ. ಇವುಗಳಲ್ಲಿ ತರಬೇತಿಗಾಗಿ ವಿಶೇಷ ಭತ್ಯೆಯೂ ಸೇರಿದೆ.
ತರಬೇತಿ ಸಂಸ್ಥೆಗಳಿಗೆ ಸಿಬ್ಬಂದಿಯಾಗಿ ನಿಯೋಜನೆಗೊಂಡ ನೌಕಕರಿಗೆ ವಿಶೇಷ ಭತ್ಯೆ ಎಂದು ಆಯೋಗ ಹೇಳಿದೆ. ತರಬೇತಿ ಸಂಸ್ಥೆಗಳಲ್ಲಿ ಬೋಧಕ ಸಿಬ್ಬಂದಿಯಾಗಿ ಕಾರ್ಯ ನಿರ್ವಹಿಸಲು ನಿಯೋಜಿಸಲಾದ ನೌಕರರಿಗಾಗಿ ಗಣನೀಯ ಪ್ರಮಾಣದ ಪ್ರೋತ್ಸಾಹಕವನ್ನು ಮೂಲ ವೇತನದ ಸುಮಾರು ಶೇ.15 ರಷ್ಟು ವಿಶೇಷ ಭತ್ಯೆಯ ರೂಪದಲ್ಲಿ ನೀಡಲು 6ನೇ ರಾಜ್ಯ ವೇತನ ಆಯೋಗವು ಶಿಫಾರಸು ಮಾಡಿತ್ತು. ಅಸಾಧರಣ ನೌಕರರು ತರಬೇತಿ ಮತ್ತು ಶೈಕ್ಷಣಿಕ ಸಂಸ್ಥೆಗಳಲ್ಲಿ ಬೋಧಕ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸುವುದನ್ನು ಉತ್ತೇಜಿಸಲು ಈ ಶಿಫಾರಸನ್ನು ಮಾಡಲಾಗಿತ್ತು. ಈ ಸಂಸ್ಥೆಗಳಲ್ಲಿ ಪ್ರತಿಭಾನ್ವಿತ ವ್ಯಕ್ತಿಗಳ ಮೂಲಕ ಗುಣಮಟ್ಟದ ತರಬೇತಿಯನ್ನು ಒದಗಿಸುವುದು ಇದರ ಮೂಲ ಉದ್ದೇಶವಾಗಿತ್ತು.
ಸರ್ಕಾರಿ ನೌಕರರ ತರಬೇತಿಯು ಪ್ರಮುಖ ಆದ್ಯತೆಯ ವಿಷಯವಾಗಬೇಕು ಎನ್ನುವುದು ಆಯೋಗದ ಅಭಿಪ್ರಾಯ. ಸರ್ಕಾರದ ಎಲ್ಲಾ ತರಬೇತಿ ಸಂಸ್ಥೆಗಳಲ್ಲಿ ಬೋಧಕ ಸಿಬ್ಬಂದಿಯಾಗಿ ನಿಯುಕ್ತಿಗೊಂಡ ಅಥವಾ ನಿಯೋಜನೆಗೊಂಡ ನೌಕರರಿಗೆ ಜಾರಿಯಲ್ಲಿರುವ ವಿಶೇಷ ಭತ್ಯೆಯನ್ನು ಶೇ.25 ರಷ್ಟು ಹೆಚ್ಚಿಸಲು ಆಯೋಗವು ಶಿಫಾರಸು ಮಾಡುತ್ತದೆ.
ಮೈಸೂರಿನ ಆಡಳಿತ ತರಬೇತಿ ಸಂಸ್ಥೆಯ ಮಹಾ ನಿರ್ದೇಶಕರೊಂದಿಗಿನ ಆಯೋಗದ ಸಮಾಲೋಚನೆಯ ಸಂದರ್ಭದಲ್ಲಿ ತರಬೇತಿ ಸಂಸ್ಥೆಗಳಿಗೆ ಯೋಗ್ಯ ಮತ್ತು ಪ್ರತಿಭಾನ್ವಿತ ನೌಕರರನ್ನು ನಿಯುಕ್ತಿಗೊಳಿಸಲು ಅಪೇಕ್ಷಿತ ಆದ್ಯತೆ ಮತ್ತು ಪ್ರಾಮುಖ್ಯತೆ ದೊರೆಯುತ್ತಿಲ್ಲವೆಂಬ ಅನಿಸಿಕೆ ಆಯೋಗಕ್ಕೆ ಬಂದಿದೆ.
ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ಈ ಪ್ರೋತ್ಸಾಹ ಧನವು ತರಬೇತಿಯ ಗುಣಮಟ್ಟದ ಮೇಲೆ ಉಂಟುಮಾಡಿರುವ ಪರಿಣಾಮದ ಮೌಲ್ಯಮಾಪನವನ್ನು ಕೈಗೊಳ್ಳುವುದು ಉಪಯುಕ್ತವಾಗಬಹುದು ಮತ್ತು ತರಬೇತಿ ಸಂಸ್ಥೆಗಳಲ್ಲಿ ಅಗತ್ಯವಾದ ಪ್ರತಿಭಾನ್ವಿತ ನೌಕರರನ್ನು ನಿಯುಕ್ತಿಗೊಳಿಸುವುದನ್ನು ಮತ್ತು ಕನಿಷ್ಠ ಮೂರು ವರ್ಷಗಳ ಅವಧಿಯನ್ನು ಪೂರ್ಣಗೊಳಿಸುವುದನ್ನು ಖಚಿತಪಡಿಸಿಕೊಳ್ಳಲು ಈ ಪ್ರೋತ್ಸಾಹಕವನ್ನು ಪರಿಣಾಮಕಾರಿಯಾಗಿ ಬಳಸಬೇಕು ಎಂಬುದು ಆಯೋಗದ ಅಭಿಪ್ರಾಯವಾಗಿದೆ ಎಂದು ಹೇಳಿದೆ.
ಪೊಲೀಸ್ ಇಲಾಖೆ ಸೇರಿದಂತೆ ಅನೇಕ ಇಲಾಖೆಗಳಿಗೆ ಈ ಭತ್ಯೆಯು ಅಸ್ತಿತ್ವದ ಬಗ್ಗೆಯೇ ಅರಿವಿಲ್ಲದಿರುವುದನ್ನು ಸಹ ಆಯೋಗವು ಪದೇ ಪದೇ ಗಮನಿಸಿದೆ. ಇಲಾಖಾ ಮುಖ್ಯಸ್ಥರು ಈ ಪ್ರಯೋಜನದ ಬಗ್ಗೆ ಸೂಕ್ತ ತಿಳುವಳಿಕೆ ಹೊಂದಿ, ತಮ್ಮ ವ್ಯಾಪ್ತಿಯ ತರಬೇತಿ ಸಂಸ್ಥೆಗಳಲ್ಲಿ ಸಾಧ್ಯವಾದಷ್ಟು ಅತ್ಯುತ್ತಮ ಸಿಬ್ಬಂದಿಯನ್ನು ಹೊಂದುವುದನ್ನು ಖಾತರಿಪಡಿಸಿಕೊಳ್ಳವುದು.
ಈ ಸಂಸ್ಥೆಗಳಲ್ಲಿ ನಿಯೋಜನೆಗೊಂಡ ಮತ್ತು ನಿಯುಕ್ತಿಯಾದ ಸರ್ಕಾರಿ ನೌಕರರಿಗೆ ಮಾತ್ರ ಅನ್ವಯವಾಗುತ್ತದೆಯೇ ಹೊರತು ಸಂಸ್ಥೆಗಳಲ್ಲಿ ನೇರವಾಗಿ ಬೋಧಕ ನೇಮಕಗೊಂಡವರಿಗಲ್ಲ ಎಂದು ಆಯೋಗವು ಸ್ಪಷ್ಟಪಡಿಸಿದೆ.
ಬೋಧಕ ಸಿಬ್ಬಂದಿಗೆ ವಿಶೇಷ ಭತ್ಯೆ:
ಗ್ರೂಪ್-ಎ ಪ್ರಸಕ್ತ ಭತ್ಯೆ 8,000 ರೂ.ಗಳು. ಪ್ರಸ್ತಾವಿತ ಭತ್ಯೆ 10,000 ರೂ.ಗಳು. ಗ್ರೂಪ್-ಬಿ ಪ್ರಸಕ್ತ ಭತ್ಯೆ 6,000 ರೂ.ಗಳು. ಪ್ರಸ್ತಾವಿತ ಭತ್ಯೆ 7,500 ರೂ.ಗಳು. ಗ್ರೂಪ್-ಸಿ ಪ್ರಸಕ್ತ ಭತ್ಯೆ 4,000 ರೂ.ಗಳು ಪ್ರಸ್ತಾವಿತ ಭತ್ಯೆ 5,000 ರೂ.ಗಳು.