High school post: ಕರ್ನಾಟ ರಾಜ್ಯದ ಪ್ರೌಢಶಾಲೆಗಳಲ್ಲಿ ಒಟ್ಟು ಎಷ್ಟು ಶಿಕ್ಷಕರ ಹುದ್ದೆಗಳು ಖಾಲಿ ಇವೆ, ಯಾವಾಗ ಭರ್ತಿ ಮಾಡಲಾಗುವುದು -2024.
High school post: ಸರ್ಕಾರಿ ಶಾಲೆಗಳಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗಳ ನೇಮಕಾತಿ ಕುರಿತು ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಚರ್ಚೆಗಳು ನಡೆಯುತ್ತಿವೆ. ಅದರಲ್ಲೂ ಪ್ರೌಢಶಾಲೆಗಳಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗಳು, ಯಾವಾಗ ಭರ್ತಿ ಕುರಿತು ಸರ್ಕಾರ ಮಾಹಿತಿಯನ್ನು ನೀಡಿದೆ. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವರು ಖಾಲಿ ಇರುವ ಹುದ್ದೆಗಳ ಸಂಖ್ಯೆಗಳ ಮಾಹಿತಿಯನ್ನು ಕೊಟ್ಟಿದ್ದಾರೆ. ಸಚಿವರ ಮಾಹಿತಿ ಪ್ರಕಾರ 11,796 ಹುದ್ದೆಗಳು ಖಾಲಿ ಇವೆ.
ವಿಧಾನಸಭೆಯಲ್ಲಿ ಗುರುಮಿಠ್‌ಕಲ್ ಶಾಸಕ ಶರಣಗೌಡ ಕಂದಕೂರ್ ಈ ಕುರಿತು ಪ್ರಶ್ನೆಯನ್ನು ಮಾಡಿದ್ದರು. ರಾಜ್ಯದಲ್ಲಿರುವ ಪ್ರೌಢಶಾಲೆಗಳ ಸಂಖ್ಯೆ ಎಷ್ಟು?. ಪ್ರೌಢಶಾಲೆಗಳಲ್ಲಿ ಖಾಲಿ ಇರುವ ವಿವಿಧ ವೃಂದಗಳ ಹುದ್ದೆಗಳ ಸಂಖ್ಯೆ ಎಷ್ಟು?, ಖಾಲಿ ಇರುವ ಹುದ್ದೆಗಳಿಂದ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗಿರುವುದರಿಂದ ಯಾವ ಕಾಲಮಿತಿಯಲ್ಲಿ ಈ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ? ಎಂದು ಪ್ರಶ್ನಿಸಿದ್ದರು.
ಸಚಿವ ಉತ್ತರ, ಖಾಲಿ ಹುದ್ದೆಗಳ ಸಂಖ್ಯೆ:
ಸಚಿವ ಮಧು ಬಂಗಾರಪ್ಪನವರ ತಮ್ಮ ಉತ್ತರದಲ್ಲಿ ರಾಜ್ಯದಲ್ಲಿರುವ ಸರ್ಕಾರಿ ಪ್ರೌಢಶಾಲೆಗಳ ಸಂಖ್ಯೆ 4071 ಎಂದು ಮಾಹಿತಿ ನೀಡಿದ್ದಾರೆ. ರಾಜ್ಯದ ಸರ್ಕಾರಿ ಪ್ರೌಢಶಾಲೆಗಳಲ್ಲಿ ಖಾಲಿಯಿರುವ ಸಹಶಿಕ್ಷಕರ ವಿಷಯವಾರು ಹುದ್ದೆಗಳ ಸಂಖ್ಯೆ 11,796 ಎಂದು ಮಾಹಿತಿ ನೀಡಿದ್ದಾರೆ.
ರಾಜ್ಯದ ಸರ್ಕಾರಿ ಪ್ರೌಢಶಾಲೆಗಳಲ್ಲಿ ಖಾಲಿ ಇರುವ ಬೋಧಕ ವೃಂದದ ಸಹ ಶಿಕ್ಷಕರ ಹುದ್ದೆಗಳ ಬದಲಾಗಿ ವಿದ್ಯಾರ್ಥಿಗಳು ಶೈಕ್ಷಣಿಕ ಹಿತದೃಷ್ಟಿಯಿಂದ ಖಾಯಂ ಹುದ್ದೆ ಭರ್ತಿ ಆಗುವವರೆಗೂ ಅಥವಾ ಶೈಕ್ಷಣಿಕ ಸಾಲಿನ ಅಂತ್ಯದವರೆಗೂ ತಾತ್ಕಾಲಿಕವಾಗಿ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳುತ್ತಿರುವುದರಿಂದ ಶಿಕ್ಷಕರ ಕೊರತೆಯನ್ನು ನೀಗಿಸಲಾಗಿದೆ ಎಂದು ಹೇಳಿದ್ದಾರೆ.
ಸರ್ಕಾರದ ಪತ್ರ ದಿನಾಂಕ 13/09/2022ರಲ್ಲಿ ರಾಜ್ಯದ ಸರ್ಕಾರಿ ಪ್ರೌಢಶಾಲೆಗಳಲ್ಲಿ ಖಾಲಿಯಿರುವ ವಿವಿಧ ವೃಂದದ ದೈಹಿಕ ಶಿಕ್ಷಣ ಶಿಕ್ಷಕರ 200 ಹುದ್ದೆಗಳು ಸೇರಿ ಒಟ್ಟು 2500 ಶಿಕ್ಷಕರುಗಳ ಹುದ್ದೆಗಳನ್ನು 15000 ಪದವೀಧರ ಪ್ರಾಥಮಿಕ ಶಾಲಾ ನೇಮಕಾತಿಯಲ್ಲಿ ಭರ್ತಿಯಾಗದೇ ಉಳಿದ ಹುದ್ದೆಗಳಿಗೆ ಹೊಂದಾಣಿಕೆ ಮಾಡಿಕೊಳ್ಳುವ ಷರತ್ತಿಗೆ ಒಳಪಟ್ಟು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಸರ್ಕಾರವು ಅನುಮತಿ ನೀಡಿರುತ್ತದೆ ಎಂದು ತಿಳಿಸಿದ್ದಾರೆ.
ಆದರೆ ಸದರಿ 15000 ಹುದ್ದೆಗಳಲ್ಲಿ ಪ್ರೌಢಶಾಲಾ ಶಿಕ್ಷಕರುಗಳ ನೇಮಕಾತಿಗೆ 1648 ಹುದ್ದೆಗಳು ಮಾತ್ರ ಉಳಿದಿರುವ ಪ್ರಯುಕ್ತ ಪ್ರಸ್ತುತ ಸಾಲಿನಲ್ಲಿ ಒಟ್ಟು 2500 ಹುದ್ದೆಗಳನ್ನು ಭರ್ತಿ ಮಾಡಲು ಅನುಮತಿ ನೀಡುವ ಪ್ರಸ್ತಾವನೆಯ ಬಗ್ಗೆ ಆಯುಕ್ತರು, ಶಾಲಾ ಶಿಕ್ಷಣ ಇಲಾಖೆ, ಬೆಂಗಳೂರು ಇವರ ಪತ್ರ ದಿನಾಂಕ 22/05/2024ರ ಕಡತವನ್ನು ಆರ್ಥಿಕ ಇಲಾಖೆಗೆ ಕಳುಹಿಸಲಾಗಿದ್ದು, ಆರ್ಥಿಕ ಇಲಾಖೆಯೊಂದಿಗೆ ಸಮಾಲೋಚಿಸಲಾಗುತ್ತಿದೆ ಎಂದು ವಿವರಣೆ ನೀಡಿದ್ದಾರೆ.
ಸರ್ಕಾರದ ಆದೇಶ ದಿನಾಂಕ 7/10/2024ರ ಆದೇಶದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶದ 7 ಜಿಲ್ಲೆಗಳಲ್ಲಿ ಖಾಲಿಯಿರುವ ಹುದ್ದೆಗಳಲ್ಲಿ ಒಟ್ಟು 385 ಹುದ್ದೆಗಳನ್ನು ಭರ್ತಿ ಮಾಡಲು ಅನುಮತಿ ನೀಡಲಾಗಿದೆ. ಸುತ್ತೋಲೆ ದಿನಾಂಕ 25/11/2024ರ ಮೂಲಕ ದಿನಾಂಕ 28/10/2024ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ತೆಗೆದುಕೊಂಡ ನಿರ್ಣಯದಂತೆ ರಾಜ್ಯ ಸಿವಿಲ್ ಸೇವೆಗಳಲ್ಲಿನ ಮೀಸಲಾತಿ ಅನ್ವಯವಾಗುವ ವೃಂದಗಳಲ್ಲಿನ ಹುದ್ದೆಗಳಿಗೆ ನೇರ ನೇಮಕಾತಿ ಮಾಡಲು ಹೊಸದಾಗಿ ಯಾವುದೇ ಅಧಿಸೂಚನೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಮುಂದಿನ ಆದೇಶದವರೆಗೂ ಹೊರಡಿಸಬಾರದೆಂದು ಸೂಚಿಸಲಾಗಿದೆ ಎಂದು ಹೇಳಿದ್ದಾರೆ.
ಪ್ರೌಢಶಾಲೆಗಳಲ್ಲಿ ಒಟ್ಟು ಪಿಸಿಎಂ 529, ಸಿಬಿಝೆಡ್ 6659, ಕಲಾ 5597, ಇಂಗ್ಲಿಶ್ 5060, ಹಿಂದಿ 1528, ಭಾಷಾ 2259, ಪಿಇಟಿ 1787, ಎಸ್‌ಪಿಎಲ್ 304 ಹುದ್ದೆಗಳು ಸೇರಿ ಒಟ್ಟು 11,796 ಹುದ್ದೆಗಳು ಖಾಲಿ ಇವೆ ಎಂದು ಸಚಿವರು ವಿವರಣೆ ಕೊಟ್ಟಿದ್ದಾರೆ.