KPTCL Recruitment: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ( KPTCL) ನೇಮಕಾತಿ, ಸರ್ಕಾರಕ್ಕೆ ಆದೇಶ-2025.
KPTCL Recruitment:ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (KPTCL) ನೇಮಕಾತಿ ವಿಚಾರದಲ್ಲಿ ಕರ್ನಾಟಕ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ ನೀಡಿದೆ. ನೇರ ನೇಮಕಾತಿ ಮೂಲಕ ಹುದ್ದೆಗಳನ್ನು ಭರ್ತಿ ಮಾಡುವುದನ್ನು ಆಕ್ಷೇಪಿಸಿ ಅರ್ಜಿ ಸಲ್ಲಿಕೆಯಾಗಿದೆ. ಈ ಕುರಿತು ವಿವರಣೆ ನೀಡುವಂತೆ KPTCL , ಕರ್ನಾಟಕ ಸರ್ಕಾರಕ್ಕೆ ನೋಟಿಸ್ ನೀಡಿ, ವಿಚಾರಣೆಯನ್ನು ಜನವರಿ 21ಕ್ಕೆ ಮುಂದೂಡಿಕೆ ಮಾಡಲಾಗಿದೆ.
ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (KPTCL) 411 ಕಿರಿಯ ಸ್ಟೇಷನ್ ಪರಿಚಾರಕ ಮತ್ತು 81 ಕಿರಿಯ ಪವರ್‌ಮ್ಯಾನ್ ಹುದ್ದೆ, ವಿವಿಧ ವಿದ್ಯುತ್ ಸರಬರಾಜು ಕಂಪನಿಗಳಲ್ಲಿನ 2,268 ಕಿರಿಯ ಪವರ್‌ಮ್ಯಾನ್ ಹುದ್ದೆಗಳ ನೇಮಕಾತಿಯನ್ನು ಕೈಗೊಂಡಿದೆ. ಆದರೆ ಈ ನೇಮಕಾತಿಯ ನಿಯಮಗಳಲ್ಲಿ ಬದಲಾವಣೆ ಮಾಡಬೇಕು ಎಂದು ಒತ್ತಾಯಿಸಲಾಗುತ್ತಿದೆ.
ಹೈಕೋರ್ಟ್‌ಗೆ ಅರ್ಜಿ.
ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ(KPTCL) ನೇಮಕಾತಿ ನಿಯಮದಲ್ಲಿ ಬದಲಾವಣೆ ತರಬೇಕು ಎಂದು ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿಗಳ ಒಕ್ಕೂಟ ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರವನ್ನು ಬರೆದಿತ್ತು. ಅಲ್ಲದೇ ಒಕ್ಕೂಟದ ಅಧ್ಯಕ್ಷ ಆರ್. ಕಾಂತಾ ಕುಮಾರ್ ಈ ಕುರಿತು ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಕೆ ಮಾಡಿದ್ದಾರೆ.
ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್. ಜಿ. ಪಂಡಿತ್ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು. ನೇಮಕಾತಿ ಪ್ರಕ್ರಿಯೆ ಸರ್ಕಾರದ ಮತ್ತು ನೇಮಕಾತಿ ಪ್ರಾಧಿಕಾರದ ನಿರ್ಧಾರವಾಗಿದೆ ಎಂದು ಹೇಳಿತು. ನ್ಯಾಯಾಲಯ ಈ ವಿಚಾರದಲ್ಲಿ ಮಧ್ಯಪ್ರವೇಶ ಮಾಡುವುದಿಲ್ಲ ಎಂದು ತಿಳಿಸಿತು.
ಅರ್ಜಿ ವಿಚಾರಣೆ ವೇಳೆ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ(KPTCL) ಗೆ ನೋಟಿಸ್ ಜಾರಿಗೊಳಿಸಿದ ನ್ಯಾಯಾಲಯ ನೇಮಕಾತಿಗೆ ಯಾವ ಪ್ರಕ್ರಿಯೆ ಅನುಸರಿಸಲಾಗುತ್ತಿದೆ ಎಂದು ವಿವರಣೆ ನೀಡಬೇಕು ಎಂದು ಸೂಚಿಸಿತು. ಸರ್ಕಾರಕ್ಕೂ ನೋಟಿಸ್ ನೀಡಿ ಅರ್ಜಿ ವಿಚಾರಣೆಯನ್ನು ಮುಂದೂಡಿಕೆ ಮಾಡಿತು.
ಸದ್ಯದ ನೇಮಕಾತಿ ಅಧಿಸೂಚನೆಯಂತೆ ಈ ನೇಮಕಾತಿಗೆ 10ನೇ ತರಗತಿ ಉತ್ತೀರ್ಣರಾಗಿರಬೇಕು ಎಂದು ವಿದ್ಯಾರ್ಹತೆ ನಿಗದಿ ಮಾಡಲಾಗಿದೆ. ಆದರೆ ನೇಮಕಾತಿಯನ್ನು ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ಮಾಡಬೇಕು ಎಂಬುದು ಬೇಡಿಕೆಯಾಗಿದೆ. ಬೇರೆ ರಾಜ್ಯಗಳಲ್ಲಿಯೂ ನೇಮಕಾತಿ ಪ್ರಕ್ರಿಯೆ ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ನಡೆಯುತ್ತಿದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.
ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ(KPTCL) ನೇಮಕಾತಿ ಕುರಿತು ಮಾಜಿ ಸಂಸದ, ಬಿಜೆಪಿ ನಾಯಕ ಪ್ರತಾಪ್ ಸಿಂಹ ಸಹ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದಾರೆ. ‘KPTCL ಲೈನ್ ಮ್ಯಾನ್ ಹುದ್ದೆಗಳನ್ನು ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕವೇ ಆಯ್ಕೆ ಮಾಡಿಕೊಳ್ಳುವ ಮೂಲಕ ಸರ್ಕಾರ ಪಾರದರ್ಶಕತೆ ಪ್ರದರ್ಶಿಸಬೇಕು. ಬೇರೆ ರಾಜ್ಯಗಳಲ್ಲಿಯೂ ಸಹ ಇದೆ ರೀತಿಯಾದ ನೇಮಕಾತಿ ಪ್ರಕ್ರಿಯೆ ಇರುವುದರಿಂದ ಕರ್ನಾಟಕವೂ ಸಹ ಇದೆ ಮಾದರಿಯನ್ನು ಅನುಸರಿಸಬೇಕು’ ಎಂದು ಒತ್ತಾಯಿಸಿದ್ದರು.
ಕರ್ನಾಟಕ ರಾಜ್ಯ ಖಾಸಗಿ ಕೈಗಾರಿಕಾ ತರಬೇತಿ ಸಂಸ್ಥೆಗಳ ಸಂಘವು ಲೈನ್‌ಮ್ಯಾನ್ ಮತ್ತು ಸ್ಟೇಷನ್ ಅಟೆಂಡರ್ ಹುದ್ದೆಗಳ ಭರ್ತಿಗೆ ಕನಿಷ್ಠ ವಿದ್ಯಾರ್ಹತೆಯನ್ನು SSLC ಬದಲಿಗೆ ITI ಶಿಕ್ಷಣವನ್ನು ಪರಿಗಣಿಸಬೇಕು ಎಂದು ಒತ್ತಾಯಿಸಿದೆ. ಈ ಹುದ್ದೆಗಳಿಗೆ ವಿದ್ಯಾರ್ಹತೆ SSLC ನಿಗದಿ ಮಾಡಿರುವುದು ಸರಿಯಲ್ಲ. ವಿದ್ಯುತ್ ನಿಗಮಗಳಲ್ಲಿನ ಕೆಲಸ ಅಪಾಯಕಾರಿಯಾಗಿದ್ದು, ಐಟಿಐ ಅಭ್ಯರ್ಥಿಗಳಿಗೆ ಈ ಬಗ್ಗೆ ತರಬೇತಿ ನೀಡಲಾಗಿರುತ್ತದೆ ಎಂದು ಹೇಳಿದೆ.