Scheduled Caste:ಗೌರವಾನ್ವಿತ ನ್ಯಾಯಮೂರ್ತಿ ಡಾ.ಹೆಚ್.ಎನ್.ನಾಗಮೋಹನದಾಸ್ ಏಕ ಸದಸ್ಯ ವಿಚಾರಣಾ ಆಯೋಗ ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷಾ ಕೈಪಿಡಿ-2025.
Scheduled Caste:ಸಮಾನತೆ ಮತ್ತು ಸಾಮಾಜಿಕ ನ್ಯಾಯವನ್ನು ಎಲ್ಲಾ ವರ್ಗದವರಿಗೆ ಎಲ್ಲಾ ಕಾಲದಲ್ಲಿಯೂ ನೀಡುವುದು ಸರ್ಕಾರದ ಅತಿ ದೊಡ್ಡ ಆಕಾಂಕ್ಷೆಯಾಗಿರುತ್ತದೆ. ಈ ಸಮಾನತೆಯ ಪರಿಕಲ್ಪನೆ ಅನೇಕ ಶ್ರೇಷ್ಠ ಚಿಂತನಶೀಲರು ಮತ್ತು ದಾರ್ಶನಿಕರಿಂದ ಸ್ಫೂರ್ತಿ ಪಡೆದಿದೆ. ಇವರಿಂದ ಪ್ರತಿಪಾದಿಸಲ್ಪಟ್ಟ ಸಮಾನತೆಯ ತತ್ವ” ವೆಂದರೆ ಎಲ್ಲಾ ನಾಗರಿಕರಿಗೆ ಸಮಾನ ಸ್ಥಾನಮಾನ ಹಾಗೂ ಅವಕಾಶಗಳನ್ನು ನೀಡುವುದಾಗಿರುತ್ತದೆ. ಭಾರತದ ಸಂವಿಧಾನದ 15ನೇ ಪರಿಚ್ಛೇದವು ಮತ, ಕುಲ, ಜಾತಿ, ಲಿಂಗ ಮತ್ತು ಜನ್ಮ ಸ್ಥಳಗಳ ಆಧಾರದ ಮೇಲೆ ಯಾವುದೇ ತಾರತಮ್ಮ ಮಾಡುವುದನ್ನು ನಿಷೇಧಿಸುತ್ತದೆ. ಅದೇ ರೀತಿ ಪರಿಚ್ಛೇದ 16ರಲ್ಲಿ ಎಲ್ಲರಿಗೂ ಸಾರ್ವತ್ರಿಕ ಉದ್ಯೋಗ ವಲಯದಲ್ಲಿ ಸರಿಸಮಾನ ಅವಕಾಶಗಳನ್ನು ಒದಗಿಸಲು ಅನುವು ಮಾಡಿಕೊಡಲಾಗಿದೆ.
ವಿಭಿನ್ನ ಸ್ಥಳಗಳಲ್ಲಿ ವಾಸವಾಗಿರುವ ಅಥವಾ ವಿಭಿನ್ನ ವೃತ್ತಿಗಳಲ್ಲಿ ತೊಡಗಿರುವ ವ್ಯಕ್ತಿಗಳು ಹಾಗೂ ಜನ ಸಮೂಹಗಳಿಗೆ ಸಾಮಾಜಿಕ ಮತ್ತು ಆರ್ಥಿಕ ಅಸಮಾನತೆಯನ್ನು ಕಡಿಮೆ ಮಾಡಲು ಮತ್ತು ಸ್ನಾನಮಾನ ಸೌಲಭ್ಯ ಹಾಗೂ ಅವಕಾಶಗಳಲ್ಲಿ ತಾರತಮ್ಯವನ್ನು ತೊಡೆದು ಹಾಕಲು ಕಾರ್ಯಕ್ರಮ ರೂಪಿಸುವುದಕ್ಕಾಗಿ ಸಾಮಾಜಿಕ ಸ್ಥಿತಿಗತಿಗಳ ಅಧ್ಯಯನ ಮಾಡಬೇಕಾಗಿರುತ್ತದೆ,
ಈ ನಿಟ್ಟಿನಲ್ಲಿ ಮಾನ್ಯ ಸರ್ವೋಚ್ಚ ನ್ಯಾಯಾಲಯವು ಪರಿಶಿಷ್ಟ ಜಾತಿಗಳಿಗೆ ಒಳಮೀಸಲಾತಿ ನೀಡಲು ರಾಜ್ಯ ಸರ್ಕಾರಗಳಿಗೆ ಅಧಿಕಾರ ಇದೆ ಎಂದು ತೀರ್ಪು ನೀಡಿರುತ್ತದೆ. ಪರಿಶಿಷ್ಟಜಾತಿಯ ಪಟ್ಟಿಯಲ್ಲಿ ಇರುವ ಜಾತಿಗಳನ್ನು ಉಪ ವರ್ಗೀಕರಣ ಮಾಡಿ ಒಳಮೀಸಲಾತಿಯನ್ನು ನೀಡಬಹುದು ಎಂದು ದಿನಾಂಕ: 01-08-2024 ರಂದು ತೀರ್ಪು ನೀಡಿದೆ. ಕರ್ನಾಟಕ ಸರ್ಕಾರವು ಒಳಮೀಸಲಾತಿಯನ್ನು ಜಾರಿಮಾಡಲು ಗೌರವಾನ್ವಿತ ನ್ಯಾಯಮೂರ್ತಿ ಹೆಚ್. ಎನ್. ನಾಗಮೋಹನ್ ದಾಸ್ ಅವರ ಅಧ್ಯಕ್ಷತೆಯಲ್ಲಿ ಏಕ ವ್ಯಕ್ತಿ ವಿಚಾರಣಾ ಆಯೋಗವನ್ನು ನೇಮಿಸಿ ಒಳಮೀಸಲಾತಿಯನ್ನು ವರ್ಗೀಕರಿಸಲು ಸೂಚಿಸಿರುವ ಹಿನ್ನೆಲೆಯಲ್ಲಿ ಉಪ ವರ್ಗೀಕರಣ ಕೈಗೊಳ್ಳಲು ಅವಶ್ಯವಿರುವ ದತ್ತಾಂಶಗಳನ್ನು ಸಂಗ್ರಹಿಸಲು ಸಮೀಕ್ಷೆಯನ್ನು ಕೈಗೊಳ್ಳಲು ಉದ್ದೇಶಿಸಿರುತ್ತದೆ.
ಪರಿಶಿಷ್ಟ ಜಾತಿಯ(Scheduled Caste) ಪಟ್ಟಿಗೆ ಸೇರಿರುವ ಜನರ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ರಾಜಕೀಯ, ಔದ್ಯೋಗಿಕ ಪ್ರಾತಿನಿಧ್ಯತೆ ಇತ್ಯಾದಿ ಸ್ಥಿತಿಗತಿಗಳ ಬಗ್ಗೆ ಸಮೀಕ್ಷೆ ಮಾಡುವುದು ಆಯೋಗದ ಉದ್ದೇಶವಾಗಿದೆ. ಪರಿಶಿಷ್ಟ ಜಾತಿಗಳ ಸ್ಥಿತಿಗತಿಗಳ ಬಗ್ಗೆ ವೈಜ್ಞಾನಿಕವಾಗಿ ಮತ್ತು ವಾಸ್ತವಿಕ ಮಾಹಿತಿ ಪಡೆದುಕೊಂಡು ಒಳ ಮೀಸಲಾತಿಯನ್ನು ವರ್ಗೀಕರಿಸಿ ಸರ್ಕಾರಕ್ಕೆ ಶಿಫಾರಸ್ಸು ಮಾಡುವುದಾಗಿರುತ್ತದೆ. ಪರಿಶಿಷ್ಟ ಜಾತಿಗಳ ನಿರ್ದಿಷ್ಟ ಸಂಖ್ಯೆ ಯಾವುದೇ ಸಮೀಕ್ಷೆ ದಾಖಲೆಗಳಿಂದ ಜಾತಿಗಳ ಜಾತಿವಾರು ಜನಸಂಖ್ಯೆಯ ಅಂಕಿ-ಅಂಶಗಳು ಖಚಿತವಾಗಿ ದೊರೆಯುತ್ತಿಲ್ಲ. ಜಾತಿವಾರು ಸಮೀಕ್ಷೆ ಅಂಕಿ ಅಂಶಗಳು ಲಭ್ಯವಿಲ್ಲದೇ ಇರುವುದರಿಂದ ಒಳ ಮೀಸಲಾತಿ ಉಪವರ್ಗೀಕರಣ ಮಾಡಲು ಸಾಧ್ಯವಾಗದೇ ಇರುವುದರಿಂದ ಈಗಿರುವ ಸ್ಥಿತಿಗಳಿಗೆ ಸಂಬಂಧಿಸಿದಂತೆ ವೈಜ್ಞಾನಿಕವಾದ ವಿಶ್ಲೇಷಣೆ ಕೈಗೊಂಡು ವರ್ಗೀಕರಣ ಮಾಡಬೇಕಾಗಿದೆ.
ಸಮೀಕ್ಷೆಯಿಂದ ಹೊರಹೊಮ್ಮಿದ ಅಂಶಗಳ ಆಧಾರದಲ್ಲಿ ಅಂತಹ ಸಮುದಾಯಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಾನಮಾನವನ್ನು ಅಧ್ಯಯನ ಮಾಡಿ ಒಳ ಮೀಸಲಾತಿ ವರ್ಗೀಕರಣವನ್ನು ಮಾಡುವುದಕ್ಕಾಗಿ ರಾಜ್ಯಾದ್ಯಂತ ಎಲ್ಲ ಪರಿಶಿಷ್ಟ ಜಾತಿಗಳ(Scheduled Caste) ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಯ ಕುರಿತು ಮನೆ-ಮನೆಗೆ ಭೇಟಿ ನೀಡಿ ಸಮೀಕ್ಷೆಯನ್ನು ಕೈಗೊಳ್ಳಲು ಉದ್ದೇಶಿಸಲಾಗಿರುತ್ತದೆ.
1.1ಸಮೀಕ್ಷೆಯ ಉದ್ದೇಶ.
ರಾಜ್ಯದ ಪ್ರತಿಯೊಂದು ಪರಿಶಿಷ್ಟ ಜಾತಿ(Scheduled Caste)ಕುಟುಂಬದ ಸಮಗ್ರ ಸಮೀಕ್ಷೆಯನ್ನು ಕೈಗೊಂಡು ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸ್ಥಿತಿಗತಿಗಳ ಬಗ್ಗೆ, ವಿಶ್ಲೇಷಣೆ ಮಾಡಿ, ಒಳ ಮೀಸಲಾತಿ ವರ್ಗೀಕರಣ ಮಾಡಿ ಸರ್ಕಾರಕ್ಕೆ ಶಿಫಾರಸ್ಸು ಮಾಡುವ ಜವಾಬ್ದಾರಿಯನ್ನು ಆಯೋಗವು ಹೊಂದಿರುತ್ತದೆ. ಸರ್ಕಾರವು ಈ ಉದ್ದೇಶಕ್ಕಾಗಿ ಪರಿಶಿಷ್ಟ ಜಾತಿಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಸಮಾಜ ಕಲ್ಯಾಣ ಇಲಾಖೆಯ ಮೂಲಕ ಕೈಗೊಳ್ಳುತ್ತಿದೆ. ಸಮೀಕ್ಷೆಯ ಉದ್ದೇಶಗಳು ಕೆಳಕಂಡಂತಿವೆ.
1. ರಾಜ್ಯದ ಎಲ್ಲ ಪರಿಶಿಷ್ಟ ಜಾತಿಗಳ(Scheduled Caste)ಸಾಮಾಜಿಕ, ಶೈಕ್ಷಣಿಕ ಮತ್ತು ಔದ್ಯೋಗಿಕ ಸ್ಥಿತಿಗತಿಗಳ ಕುರಿತು ಸಮೀಕ್ಷೆ ಮುಖಾಂತರ ಸಮಗ್ರ ಅಂಕಿ-ಅಂಶಗಳನ್ನು ಸಂಗ್ರಹಿಸುವುದು,
2. ಸಮೀಕ್ಷೆಯಲ್ಲಿ ಅನುಸರಿಸಿದ ವಿವಿಧ ಮಾನದಂಡಗಳ ಆಧಾರದ ಮೇಲೆ ಸಂಗ್ರಹಿಸಿದ ಅಂಕಿ-ಅಂಶಗಳ ಹಿನ್ನಲೆಯಲ್ಲಿ ಒಳ ಮೀಸಲಾತಿಯ ವರ್ಗೀಕರಣ ಮಾಡುವುದು.
1.2ಸಮೀಕ್ಷೆದಾರರ ಪ್ರಾಮುಖ್ಯತೆ.
ನೀವು ಸಮೀಕ್ಷೆದಾರನಾಗಿ ಆಯ್ಕೆಗೊಂಡಿರುವುದು ಒಂದು ಸುಯೋಗ, ಸಮೀಕ್ಷೆದಾರರಾಗಿ ನೀವು ಮಹತ್ವದ ಕರ್ತವ್ಯವನ್ನು ನಿರ್ವಹಿಸುತ್ತಿದ್ದೀರಿ. ಮತ್ತು ಇದರಲ್ಲಿ ನಿಮ್ಮ ಪಾತ್ರ ಮಹತ್ವದ್ದಾಗಿವೆ. ನೀವು ಹೆಮ್ಮೆಯಿಂದ ಮತ್ತು ನಿಷ್ಠೆಯಿಂದ ಸಕ್ರಿಯವಾಗಿ ಭಾಗವಹಿಸಿ ಸಮೀಕ್ಷೆಯನ್ನು ಪೂರ್ಣಗೊಳಿಸಬೇಕಾಗಿದೆ. ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಕೈಗೊಳ್ಳುವ ಮುನ್ನ ನಿಮಗೆ ವಹಿಸಿದ ಪ್ರದೇಶದಲ್ಲಿನ ಹಿರಿಯ ಮತ್ತು ಪ್ರಮುಖ ವ್ಯಕ್ತಿಗಳನ್ನು ಭೇಟಿ ಮಾಡಿ ನಿಮ್ಮ ಭೇಟಿಯ ಉದ್ದೇಶವನ್ನು ನಿವಾಸಿಗಳಿಗೆ ವಿವರಿಸುವ ಮೂಲಕ ಅವರೊಂದಿಗೆ ನಿಕಟ ಸೌಹಾರ್ದತೆಯನ್ನು ಹೊಂದಬೇಕು. ನಿಮಗೆ ನೇಮಕಾತಿ ಪತ್ರ ಮತ್ತು ಗುರುತಿನ ಚೀಟಿಯನ್ನು ನೀಡಲಾಗಿದೆ. ಸಮೀಕ್ಷೆ ಕಾರ್ಯಕ್ಕೆ ಹೋಗುವ ಎಲ್ಲ ಸಮಯದಲ್ಲಿ ಗುರುತಿನ ಚೀಟಿಯನ್ನು ಕೊರಳಲ್ಲಿ ತಪ್ಪದೇ ಧರಿಸಿರಬೇಕು. ಯಾವುದೇ ಕುಟುಂಬವನ್ನು ಸಂದರ್ಶಿಸಿ, ಪ್ರಶ್ನಾವಳಿಯಲ್ಲಿನ ಪ್ರಶ್ನೆಗಳನ್ನು ಕೇಳುವಾಗ ಅವಸರ ಮಾಡಬೇಡಿ. ಯಾವಾಗಲೂ ನಗುಮುಖದೊಡನೆ ಮತ್ತು ಸೌಜನ್ಯ ಪೂರ್ವಕವಾಗಿ, ನಿಮ್ಮ ಭೇಟಿಯ ಉದ್ದೇಶವನ್ನು ಮನೆಯ ಸದಸ್ಯರಿಗೆ ಸಂಕ್ಷಿಪ್ತವಾಗಿ ವಿವರಿಸಿ ನಿಮ್ಮ ಕಿರು ಪರಿಚಯದೊಡನೆ ಮುಂದುವರೆಯಿರಿ ನಿಮ್ಮ ಸ್ನೇಹಪೂರ್ವಕ ಮತ್ತು ವಿವೇಚನಾಯುತ ನಡೆನುಡಿಗಳು ಹಾಗೂ ವಿನಯಪೂರ್ವಕವಾಗಿ ಆಡಿದ ಕೆಲವು ಒಳ್ಳೆಯ ಮಾತುಗಳು ಕುಟುಂಬ ಸದಸ್ಯರಿಗೆ ನಿರಾಳತೆಯನ್ನು ನೀಡಿ, ಅವರು ಸರಿಯಾದ ಉತ್ತರವನ್ನು ನೀಡಲು ಅನುಕೂಲವಾಗುತ್ತದೆ.
ಈ ಸೂಚನಾ ಕೈಪಿಡಿಯು ಮೊಬೈಲ್ ಅಪ್ ನಲ್ಲಿ ಸಮೀಕ್ಷೆಯಲ್ಲಿನ ಮಾಹಿತಿಯನ್ನು ತುಂಬುವ ಕುರಿತು ನೀಡಿರುವ ವಿಸ್ತ್ರತ ಮಾರ್ಗದರ್ಶಿಯಾಗಿದೆ. ಸಮೀಕ್ಷೆಗೆ ಸಂಬಂಧಿಸಿದ ನಮೂನೆಗಳನ್ನು ಭರ್ತಿ ಮಾಡುವಾಗ ಸಾಮಾನ್ಯವಾಗಿ ಉದ್ಭವವಾಗಬಹುದಾದ ಎಲ್ಲಾ ಸಮಸ್ಯೆಗಳ ಬಗ್ಗೆಯೂ ವಿವರ ನೀಡಲು ಸಾಕಷ್ಟು ಪ್ರಯತ್ನಗಳನ್ನು ಮಾಡಲಾಗಿದೆ. ಯಾವುದೇ ರೀತಿಯ ಸಂದೇಹ ನಿವಾರಣೆಗಾಗಿ ನಿಮ್ಮ ಮೇಲ್ವಿಚಾರಕರು ಅಥವಾ ಸಂಪನ್ಮೂಲ ವ್ಯಕ್ತಿಯನ್ನು ಸಂಪರ್ಕಿಸಬಹುದು. ತರಬೇತಿಗೆ ಹಾಜರಾದಾಗ ಅವರ ಮೊಬೈಲ್ ಸಂಖ್ಯೆ ಪಡೆದುಕೊಳ್ಳಲು ಮರೆಯಬೇಡಿ.
1.3ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಸಮಯದಲ್ಲಿ ಸಮೀಕ್ಷೆದಾರರ ಪಾತ್ರ ಮತ್ತು ಜವಾಬ್ದಾರಿಗಳು.
ಮೊಬೈಲ್ ಆಪ್ ನಲ್ಲಿಯ ಅಂಶ/ಕಾಲಂಗಳನ್ನು ಅರ್ಥ ಮಾಡಿಕೊಂಡು ಅವುಗಳನ್ನು ಭರ್ತಿ ಮಾಡುವ ಬಗ್ಗೆ, ಈ ಕೈಪಿಡಿಯಲ್ಲಿ ಸವಿಸ್ತಾರವಾಗಿ ವಿವರಿಸಲಾಗಿದೆ. ನೀವು ಈ ಸೂಚನೆಗಳ ಪರಿಚಯವನ್ನು ಮಾಡಿಕೊಳ್ಳುವುದು ಅತ್ಯಾವಶ್ಯಕ. ಸೂಚನೆಗಳನ್ನು ಪೂರ್ಣವಾಗಿ ಹಾಗೂ ಸ್ಪಷ್ಟವಾಗಿ ತಿಳಿದುಕೊಂಡ ಮೇಲೆ ಕುಟುಂಬದ ಅನುಸೂಚಿಯನ್ನು ನೈಜವಾಗಿ ಹಾಗೂ ಪ್ರಾಮಾಣಿಕವಾಗಿ ಭರ್ತಿ ಮಾಡುವುದರ ಮೇಲೆ ಸಮೀಕ್ಷೆಯ ಯಶಸ್ಸು ಅವಲಂಬಿಸಿದೆ. ತರಬೇತಿ ಸಮಯದಲ್ಲಿ ಅನುಮಾನಗಳು ಇದ್ದರೆ, ತರಬೇತಿ ಶಿಬಿರದಲ್ಲಿ ತರಬೇತುದಾರರಿಂದ ವಿವರಣೆಯನ್ನು ಪಡೆಯಲು ಹಿಂಜರಿಯಬೇಡಿರಿ.
1.4ಕಾರ್ಯಭಾರ.
ನಿಮಗೆ ವಹಿಸಲಾಗಿರುವ ಸಮೀಕ್ಷೆ ಬ್ಲಾಕಿನಲ್ಲಿ ಅಂದಾಜು 200 ರಿಂದ 300 ಕುಟುಂಬಗಳು ಇರುತ್ತವೆ. ಸಮೀಕ್ಷೆ ಬ್ಲಾಕಿನ ಪ್ರದೇಶವು ಮತಗಟ್ಟೆ ಪ್ರದೇಶಕ್ಕೆ ಸಮನಾಗಿರುತ್ತದೆ. ಸಮೀಕ್ಷದಾರರು ಈ ಪ್ರದೇಶ ವ್ಯಾಪ್ತಿಯ ಎಲ್ಲಾ ಮನೆಗಳಿಗೆ ಭೇಟಿ ನೀಡಿ, ಪರಿಶಿಷ್ಟ ಜಾತಿಗೆ ಸೇರಿದ ಕುಟುಂಬಗಳನ್ನು ಗುರುತಿಸಬೇಕು. ಗುರುತಿಸಲಾದ ಪರಿಶಿಷ್ಟ ಜಾತಿಗೆ ಸೇರಿದ ಕುಟುಂಬಗಳ ಎಲ್ಲಾ ಸದಸ್ಯರ ಮಾಹಿತಿಯನ್ನು ಮುಂದೆ ಸೂಚಿಸಲಾಗುವ ಮಾರ್ಗಸೂಚಿಗಳ್ಳನಯ ನಿಗದಿತ ನಮೂನೆ-3ರಲ್ಲಿ ಇರುವ ಅಂಶಗಳಿಗೆ ಮೊಬೈಲ್ ಆಪ್ ಮೂಲಕ ಮಾಹಿತಿಯನ್ನು ದಾಖಲಿಸಬೇಕು, ಈ ಕಾರಣದಿಂದಾಗಿ ನೀವು ಯಾವುದೇ ಕುಟುಂಬಗಳನ್ನು ಕೈಬಿಡದಂತೆ ಜಾಗರೂಕತೆ ವಹಿಸಬೇಕು. ಇದಲ್ಲದೇ ಯಾವುದೇ ಕುಟುಂಬವನ್ನು ಒಂದಕ್ಕಿಂತಲೂ ಹೆಚ್ಚು ಬಾರಿ ಸಮೀಕ್ಷೆಯಲ್ಲಿ ಒಳಪಡಿಸದಂತೆ ನೋಡಿಕೊಳ್ಳಬೇಕು.
1.5 ಸಮೀಕ್ಷೆದಾರರ ತರಬೇತಿ.
ರಾಜ್ಯ ಮಟ್ಟದಲ್ಲಿ ಸಮೀಕ್ಷೆಗೆ ಸಂಬಂಧಿಸಿದಂತೆ ಮಾಸ್ಟರ್ ಟ್ರೈನರ್ ಗಳಿಗೆ ತರಬೇತಿಯನ್ನು ನೀಡಲಾಗುವುದು. ಸದರಿ ಮಾಸ್ಟರ್ ಟ್ರೈನರ್ ಗಳು ಜಿಲ್ಲಾ ಮಟ್ಟದಲ್ಲಿ ನಗರ ಸ್ಥಳೀಯ ಸಂಸ್ಥೆ (ULB) ಗಳ ಮಟ್ಟದಲ್ಲಿ ಹಾಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಮಟ್ಟದಲ್ಲಿ ತರಬೇತುದಾರರಿಗೆ ತರಬೇತಿಯನ್ನು ನೀಡುತ್ತಾರೆ. ಈ ಮಟ್ಟದಲ್ಲಿ ತರಬೇತಿ ಹೊಂದಿದ ತರಬೇತಿದಾರರು ತಾಲ್ಲೂಕು ಮಟ್ಟದಲ್ಲಿ ಹಾಗೂ ಸ್ಥಳೀಯ ಸಂಸ್ಥೆಗಳ ವಾರ್ಡ್ ಮಟ್ಟದಲ್ಲಿ ಸಮೀಕ್ಷಾದಾರರಿಗೆ ಹಾಗೂ ಮೇಲ್ವಿಚಾರಕರಿಗೆ ತರಬೇತಿಯನ್ನು ನೀಡುವರು. ಜಿಲ್ಲಾ ಮಟ್ಟದ ನಗರ ಮಟ್ಟದ ಹಾಗೂ ತಾಲ್ಲೂಕು ಮಟ್ಟದ ಸಮನ್ವಯ ಸಮಿತಿಗಳು ತರಬೇತಿಯು ಸಮರ್ಪಕವಾಗಿ ಹಾಗೂ ಪರಿಣಾಮಕಾರಿಯಾಗಿ ನಡೆಯುವಂತೆ ನೋಡಿಕೊಳ್ಳುವುದು.
- Read more…
Pouthi Khata Abhiyana:ಕುಟುಂಬದ ಮೃತರ ಹೆಸರಿನಿಂದ ಜಮೀನಿನ ಮಾಲೀಕತ್ವ ವರ್ಗಾವಣೆಗೆ ಸರ್ಕಾರದಿಂದ ನೂತನ ಕ್ರಮ.
ನಿಗದಿಪಡಿಸಿದ ದಿನಗಳಂದು ಸಮೀಕ್ಷೆದಾರರು ಹಾಗೂ ಮೇಲ್ವಿಚಾರಕರು ತಪ್ಪದೇ ತರಬೇತಿ ತರಗತಿಗಳಿಗೆ ಹಾಜರಾಗುವುದು. ಸಮೀಕ್ಷೆಗಾಗಿ ನೀಡುವ ಕುಟುಂಬದ ಅನುಸೂಚಿ (ನಮೂನೆ 3) ಭರ್ತಿ ಮಾಡುವ ವಿಷಯದಲ್ಲಿ ಕೈಪಿಡಿಯಲ್ಲಿ ನೀಡಲಾಗಿರುವ ಸೂಚನೆಗಳನ್ನು ಎಚ್ಚರಿಕೆಯಿಂದ ಅಧ್ಯಯನ ಮಾಡಿ ಅವುಗಳನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳುವುದು, ನಮೂನೆ-3 ರಲ್ಲಿನ ಕಾಲಂನಲ್ಲಿರುವ ಬಹುತೇಕ ಅಂಶಗಳಿಗೆ ಮಾಹಿತಿಯನ್ನು ಕೋಡ್ ಸಂಖ್ಯೆಗಳಲ್ಲಿ ಒದಗಿಸಬೇಕಾಗಿರುತ್ತದೆ. ಅದಕ್ಕೆ ಅನುಕೂಲವಾಗುವಂತೆ ಕೋಡ್ ಸಂಖ್ಯೆಗಳನ್ನು ಅನುಬಂಧ-2 ಹಾಗೂ 2ಎ, 2ಬಿ ಗಳಲ್ಲಿ ನಮೂದಿಸಿ ಅವುಗಳನ್ನು ಸಮೀಕ್ಷೆದಾರರ ಕೈಪಿಡಿಯಲ್ಲಿ ನೀಡಲಾಗಿದೆ. ಈ ಅಂಶಗಳನ್ನು ಸಮೀಕ್ಷೆಗಾಗಿ ಸಿದ್ಧಪಡಿಸಿರುವ ಮೊಬೈಲ್ ಆಪ್ ನಲ್ಲಿಯೂ ಅಳವಡಿಸಲಾಗಿದೆ. ಸೂಚನೆಗಳಲ್ಲಿನ ಯಾವುದೇ ಭಾಗವು ಸ್ಪಷ್ಟವಾಗಿರದಿದ್ದಲ್ಲಿ/ಅರ್ಥವಾಗಿರದಿದ್ದಲ್ಲಿ ನಿಮ್ಮ ತರಬೇತಿದಾರರಿಂದ ಸೃಷ್ಟಿಕರಣವನ್ನು ಪಡೆಯುವುದು ಮೊಬೈಲ್ ಆಫ್ ಅನ್ನು ಹೇಗೆ ಬಳಸಬೇಕು ಮತ್ತು ವಿವಿಧ ಹಂತಗಳಲ್ಲಿ ಮಾಹಿತಿ ಪಡೆದುಕೊಳ್ಳುವ ಕುರಿತು ತರಬೇತಿ ವೇಳೆಯಲ್ಲಿ ತಿಳಿದುಕೊಳ್ಳಬೇಕು.