ಪಂಚಾಯತ್ ರಾಜ್ ಕಾಯ್ದೆಗೆ ಅಮೃತ ಕಾಲ-2024.
ಆಡಳಿತ ವ್ಯವಸ್ಥೆಯ ಯೋಜನೆಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಬೇಕೆಂಬುದು ಪ್ರಜಾಪ್ರಭುತ್ವದ ಮೂಲ ಆಶಯ. ಸರ್ಕಾರದ ಆಡಳಿತ ಜನಮುಖಿಯಾದಾಗ ಮಾತ್ರ ವ್ಯವಸ್ಥೆ ಜನಪರವಾಗಿರಲು ಸಾಧ್ಯ. ಕಾರ್ಯಾಂಗದ ಅಧಿಕಾರ ಕೆಳಹಂತದವರೆಗೂ ಹಂಚಿಕೆಯಾಗಬೇಕೆಂಬುದು ಸಂವಿಧಾನದ ಸದಾಶಯ. ಈ ಆಶಯದ ಈಡೇರಿಕೆಗಾಗಿ ರೂಪುಗೊಂಡಿದ್ದು ಕರ್ನಾಟಕ ಗ್ರಾಮಸ್ವರಾಜ್ ಮತ್ತು ಪಂಚಾಯತ್ ರಾಜ್ ವ್ಯವಸ್ಥೆ. ಸಂವಿಧಾನದ ೭೩ನೇ ತಿದ್ದುಪಡಿಯನ್ವಯ ದೇಶದಲ್ಲೇ ಮೊಟ್ಟಮೊದಲ ಬಾರಿಗೆ ಕರ್ನಾಟಕದಲ್ಲಿ ೧೯೯೩ರ ಮೇ ೧೦ರಂದು ಅನುಷ್ಠಾನಕ್ಕೆ ತರಲಾದ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯ್ದೆಗೆ ಮೂರು ದಶಕಗಳು ಸಂದಿರುವ ಈ ಹೊತ್ತಿನಲ್ಲಿ ಕಾಯ್ದೆಗೆ ಆನೆಬಲ ತರುವ ಕೆಲಸ ಸದ್ದಿಲ್ಲದೆ ನಡೆದಿರುವುದು ಮಹತ್ವದ ಬೆಳವಣಿಗೆ.
-
https://mahitikannada.com/%e2%82%b91000-to-e-shrum-cardholders-account-new-govt-plan-2024/ ಮಹಾತ್ಮಾಗಾಂಧಿ ಅವರ ಗ್ರಾಮ ಸ್ವರಾಜ್ಯದ ಕನಸನ್ನು ನನಸಾಗಿಸುವ ದೆಸೆಯಲ್ಲಿ ಗ್ರಾಮ ಪಂಚಾಯಿತಿಗಳು ಗ್ರಾಮ ಸರ್ಕಾರಗಳಾಗಿ, ತಾಲ್ಲೂಕು ಪಂಚಾಯಿತಿಗಳು ತಾಲ್ಲೂಕು ಸರ್ಕಾರಗಳಾಗಿ ಮತ್ತು ಜಿಲ್ಲಾ ಪಂಚಾಯಿತಿಗಳು ಜಿಲ್ಲಾ ಸರ್ಕಾರಗಳಾಗಿ ಜವಾಬ್ದಾರಿ ನಿರ್ವಹಿಸಬೇಕಾದರೆ ಅವಶ್ಯಕ ಅಧಿಕಾರ, ಹಣಕಾಸಿನ ನೆರವು ಮತ್ತು ಅಧಿಕಾರಿಗಳನ್ನು ಹಸ್ತಾಂತರಿಸುವುದು ಅತ್ಯವಶ್ಯಕ. ಆ ನಿಟ್ಟಿನಲ್ಲಿ ಹಿರಿಯ ಸಹಕಾರಿ ಧುರೀಣರು, ಮಾಜಿ ಶಾಸಕರೂ ಆದ ಡಿ.ಆರ್.ಪಾಟೀಲ್ ಅವರ ಅಧ್ಯಕ್ಷತೆ, ಪ್ರಮೋದ್ ಹೆಗ್ಗಡೆ ಅವರ ಉಪಾಧ್ಯಕ್ಷತೆಯಲ್ಲಿ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ರಚಿಸಿದ್ದ ಪಂಚಾಯತ್ ರಾಜ್ ಕಾಯ್ದೆಯ ನೀತಿ ನಿರೂಪಣಾ ಸಮಿತಿಯ ವರದಿ ಅನುಷ್ಠಾನಗೊಳ್ಳುವ ಶುಭಕಾಲ ಈಗ ಬಂದಿದೆ. ಇದು ಪಂಚಾಯತ್ ರಾಜ್ ವ್ಯವಸ್ಥೆಯ `ಅಮೃತಕಾಲ’ ಕ್ಕೆ ರಹದಾರಿ ಒದಗಿಸಲಿರುವುದು ವಿಶೇಷ.
ಪಂಚಾಯತ್ ರಾಜ್ ಕಾಯ್ದೆಯು ತ್ರಿಸ್ಥರದ ಪಂಚಾಯಿತಿಗಳಾದ ಗ್ರಾಮ ಪಂಚಾಯತಿ, ತಾಲ್ಲೂಕು ಪಂಚಾಯತಿ ಮತ್ತು ಜಿಲ್ಲಾ ಪಂಚಾಯತಿಗಳು ಸ್ಥಳೀಯ ಸ್ವಯಂ ಆಡಳಿತ ವ್ಯವಸ್ಥೆಗಳಾಗಿ ಕಾರ್ಯ ನಿರ್ವಹಿಸಲು ಅವುಗಳಿಗೆ ವಹಿಸಬೇಕಾಗಿರುವ ನಿರ್ದಿಷ್ಟ ಜವಾಬ್ದಾರಿಗಳು, ಬಹುಬಗೆಯ ಅಧಿಕಾರ ನೀಡಿಕೆ, ಇಲಾಖಾವಾರು ಕಾರ್ಯಕ್ರಮಗಳ ಸಂಯೋಜನೆ, ನಿರ್ವಹಣೆಯ ಹೊಣೆಗಾರಿಕೆ, ಫಲಾನುಭವಿಗಳನ್ನು ಆಯ್ಕೆ ಮಾಡಿಕೊಳ್ಳುವ ವಿಧಾನ, ನಿಯಮಿತವಾಗಿ ಗ್ರಾಮ ಸಭೆಗಳನ್ನು ಕಡ್ಡಾಯವಾಗಿ ನಡೆಸುವ ಬಗೆ, ಅನುದಾನ ನೀಡಿಕೆಯಲ್ಲಿ ಆಗಬೇಕಿರುವ ಹೆಚ್ಚಳ, ವಿವಿಧ ಇಲಾಖೆಗಳ ಸೇವೆಗಳನ್ನು ಒಂದೇ ಸೂರಿನಡಿ ಒದಗಿಸಬೇಕಾದ ಅಗತ್ಯತೆ ಮುಂತಾದ ಹತ್ತಾರು ಪ್ರಮುಖ ಶಿಫಾರಸ್ಸುಗಳನ್ನು ಡಿ.ಆರ್.ಪಾಟೀಲ್ ನೇತೃತ್ವದ ಸಮಿತಿ ತನ್ನ ಮಹತ್ವಪೂರ್ಣ ವರದಿಯಲ್ಲಿ ಮಾಡಿರುವುದು ಪಂಚಾಯತ್ ರಾಜ್ ವ್ಯವಸ್ಥೆಯ ಪರಿಣಾಮಕಾರಿ ಅನುಷ್ಠಾನದ ಹಾದಿಯಲ್ಲಿ ಇಟ್ಟಿರುವ ಕ್ರಾಂತಿಕಾರಕ ಹೆಜ್ಜೆ. - https://mahitikannada.com/free-treatment-up-to-5-lakhs-how-to-get-ayushman-card-2024/
ಪಂಚಾಯತ್ ರಾಜ್ ವ್ಯವಸ್ಥೆಯನ್ನು ಬಲಪಡಿಸುವ ಡಿ.ಆರ್.ಪಾಟೀಲ್ ಸಮಿತಿಯ ವರದಿಯನ್ನು ೨೦೨೩ರ ನವೆಂಬರ್ ೧೬ರಂದು ಸರ್ಕಾರ ಸ್ವೀಕರಿಸಿದೆ. ಕರ್ನಾಟಕ ರಾಜ್ಯ ವಿಕೇಂದ್ರಿಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿಯ ಅಧ್ಯಕ್ಷರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವರದಿಯ ಅನುಷ್ಠಾನದ ಕುರಿತು ಸಂಪುಟ ಸಹೋದ್ಯೋಗಿಗಳೊಂದಿಗೆ ಉನ್ನತ ಮಟ್ಟದ ಸಮಾಲೋಚನೆಯನ್ನೂ ನಡೆಸಿದ್ದಲ್ಲದೆ, ಮೂರು ಹಂತದ ಪಂಚಾಯಿತಿಗಳಿಗೆ ಜವಾಬ್ದಾರಿ ನಕ್ಷೆಯನ್ನು ರೂಪಿಸಿ ಅನುಷ್ಠಾನಗೊಳಿಸುವುದಾಗಿ ಮುಂಗಡಪತ್ರದಲ್ಲಿ ಘೋಷಿಸಿದ್ದೂ ಆಗಿದೆ. ಇದೀಗ ಆ ಘೋಷಣೆ ಅನುಷ್ಠಾನವಾಗುವುದೊಂದೇ ಬಾಕಿ.
ಆಡಳಿತ ವ್ಯವಸ್ಥೆಯಲ್ಲಿ ಯೋಜನೆಗಳ ಅನುಷ್ಠಾನದಲ್ಲಿ ವಿಳಂಬವಾಗುವುದು ಸಹಜ. ಬದ್ಧತೆ ಮತ್ತು ಇಚ್ಛಾಶಕ್ತಿಗಳು ಮೇಳೈಸಿದಾಗ ಅಸಾಧ್ಯವೂ ಸಾಧ್ಯ. ಡಿ.ಆರ್.ಪಾಟೀಲರ ಸಮಿತಿಯ ವರದಿ ಜಾರಿಗಾಗಿ ಮೇಲ್ಮನೆಯ ಕಾಂಗ್ರೆಸ್ ಸದಸ್ಯ ಪ್ರಕಾಶ್ ಕೆ.ರಾಥೋಡ್ ಅವರು ಕಾಲಕಾಲಕ್ಕೆ ಸದನದಲ್ಲಿ ಮತ್ತೆ ಮತ್ತೆ ಪ್ರಸ್ತಾಪಿಸುವ ಮೂಲಕ ಸರ್ಕಾರದ ಗಮನಸೆಳೆದ ಪರಿ ಅನುಕರಣೀಯ. ಈ ಪ್ರಸ್ತಾಪದ ಹಿಂದಿನ ಪ್ರೇರಕ ಶಕ್ತಿಯಾಗಿ ಪಾಟೀಲರ ಸಮಿತಿ ಕಾರ್ಯನಿರ್ವಹಿಸಿದ್ದು ವಿಶೇಷ. ಪ್ರಕಾಶ್ ರಾಥೋಡ್ ಅವರು ಪರಿಷತ್ತಿನಲ್ಲಿ ಮಾಡಿದ ಜನಪರವಾದ ಆಗ್ರಹಕ್ಕೆ ಸರ್ಕಾರ ಸಹ ಸಕಾರಾತ್ಮಕಾಗಿ ಸ್ಪಂದಿಸಿರುವುದು ಬಹುಮುಖ್ಯ ಸಂಗತಿ.
ಇದೀಗ ಪಂಚಾಯತ್ ರಾಜ್ ಕಾಯ್ದೆಯ ನೀತಿ ನಿರೂಪಣಾ ಸಮಿತಿಯ ಶಿಫಾರಸ್ಸುಗಳು, ಅವುಗಳ ಜಾರಿಗಾಗಿ ನಡೆದ ಪ್ರಯತ್ನಗಳು-ಹಕ್ಕೊತ್ತಾಯಗಳು ಫಲಿಸುವ ಶುಭಕಾಲ ಬರುವ ಮುನ್ಸೂಚನೆ ದೊರೆತಿದೆ. ಪ್ರತಿ ಪಂಚಾಯಿತಿಗೂ ಸರ್ಕಾರದ ವಿವಿಧ ಇಲಾಖೆಗಳ ಅಡಿಯಲ್ಲಿ ಹಲವು ಜವಾಬ್ದಾರಿಗಳನ್ನೂ ವಹಿಸಲಾಗುತ್ತಿದೆ. ಪ್ರಮುಖವಾಗಿ ಗ್ರಾಮೀಣ ಭಾಗದ ಜನರ ಬದುಕಿನೊಂದಿಗೆ ಬೆರೆತಿರುವ ಕೃಷಿ, ತೋಟಗಾರಿಕೆ, ಪಶುಸಂಗೋಪನೆ, ಮೀನುಗಾರಿಕೆ, ರೇಷ್ಮೆ ಇಲಾಖೆಯ ಹಲವು ಯೋಜನೆಗಳ ಫಲಾನು ಭವಿಗಳ ಆಯ್ಕೆಯನ್ನು ಗ್ರಾಮಸಭೆಯ ಮೂಲಕವೇ ಮಾಡುವುದನ್ನು ಕಡ್ಡಾಯಗೊಳಿಸಲಾಗಿದೆ. ಒಂದೇ ಸೂರಿನಡಿ ವಿವಿಧ ಇಲಾಖೆಗಳ ಸೇವೆ ಒದಗಿಸುವ ಬಾಪೂಜಿ ಸೇವಾ ಕೇಂದ್ರಗಳನ್ನು ತೆರೆಯಲಾಗಿದೆ. ಸಮಾಜ ಕಲ್ಯಾಣ ಇಲಾಖೆ, ಪರಿಶಿಷ್ಟ, ಪಂಗಡಗಳ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸೇರಿದಂತೆ ಹಲ ಪ್ರಮುಖ ಇಲಾಖೆಗೆ ಮಹತ್ವದ ಯೋಜನೆ-ಚಟುವಟಿಕೆಗಳ ಹೊಣೆಗಾರಿಕೆಯನ್ನು ಪಂಚಾಯಿತಿಗಳಿಗೆ ವಹಿಸಲಾಗುತ್ತಿರುವುದು ಮಹತ್ವದ ಬದಲಾವಣೆಯ ಪ್ರತೀಕ. ಸ್ಥಳೀಯ ಸಮಸ್ಯೆಗಳಿಗೆ ಸ್ಥಳೀಯವಾಗಿಯೇ ಪರಿಹಾರ ಕಂಡುಕೊಳ್ಳುವ ಅಧಿಕಾರವನ್ನು ಗ್ರಾಮ ಪಂಚಾಯಿತಿಗಳಿಗೆ ನೀಡಲಾಗುತ್ತಿರುವುದು ಪಂಚಾಯತ್ ರಾಜ್ ಕಾಯ್ದೆಗೆ ನಿಸ್ಸಂಶಯವಾಗಿ ಆನೆಬಲ ತರಲಿರುವುದು ನಿಶ್ಚಿತ.
ಕರ್ನಾಟಕ ಪಂಚಾಯತ್ ರಾಜ್ ಕಾಯ್ದೆಯನ್ನು ಬಲವರ್ಧನೆಗೊಳಿಸುವ ಸಂಬಂಧ ರೂಪಿಸಿರುವ ನೀತಿ ನಿರೂಪಣೆಯ ಯೋಜನಾನುಷ್ಠಾನಕ್ಕೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಸಮ್ಮತಿಸಿದ್ದು ಶುಭಮುಹೂರ್ತ ಕೂಡಿಬರುವುದೊಂದೇ ಬಾಕಿಯಿದೆ. ಕ್ವಿಟ್ ಇಂಡಿಯಾ ದಿನವಾದ ಆಗಸ್ಟ್ ೯, ಸ್ವಾತಂತ್ರ್ಯ ದಿನವಾದ ಆಗಸ್ಟ್ ೧೫ ಅಥವಾ ದೇಶದಲ್ಲಿ ಪಂಚಾಯತ್ ರಾಜ್ ವ್ಯವಸ್ಥೆ ಜಾರಿಗೊಳಿಸಿದ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಜನ್ಮದಿನವಾದ ಆಗಸ್ಟ್ ೨೦ರಂದು ಕಾಯ್ದೆಯ ಹೊಸ ಸ್ವರೂಪ ಜಾರಿಗೆ ಬರಲೆಂಬ ಒತ್ತಾಯಗಳು
ಕೇಳಿಬಂದಿವೆಯಾದರೂ ಇನ್ನೂ ಸುಮುಹೂರ್ತ ನಿಗದಿಯಾಗಿಲ್ಲ. ಶುಭಕಾರ್ಯಕ್ಕೆ, ಜನಪರವಾದ ಕೆಲಸಕ್ಕೆ ಪ್ರತಿ ದಿನವೂ ಶುಭವೇ. ಸರ್ಕಾರ ಪಂಚಾಯತ್ ರಾಜ್ ಕಾಯ್ದೆಯ ಜವಾಬ್ದಾರಿ ನಕ್ಷೆಯನ್ನು ಅನುಷ್ಠಾನ ಗೊಳಿಸುವ ದಿನವೇ ಅಧಿಕಾರ ವಿಕೇಂದ್ರೀಕರಣದ ಕಾಯ್ದೆಯ ಪಾಲಿಗೆ ಅಮೃತಘಳಿಗೆ. ಆ ಘಳಿಗೆ ಬಹುಬೇಗ ಬರಲಿದೆ ಎಂಬುದು ಗ್ರಾಮಸ್ವರಾಜ್ಯದ ಕನಸುಗಾರರಿಗೆ ಸಂತಸದ ಸಮಾಚಾರವಂತೂ ಹೌದು.