ಜಗತ್ತಿನ ಪ್ರಾಚೀನ ನಾಗರಿಕತೆಗಳ ಇತಿಹಾಸ – ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತ ಮಾಹಿತಿ-2024.
ಪ್ರಾಚೀನ ನಾಗರಿಕತೆಗಳು- ಸಾ.ಶ.ಪೂ. 10,000 ದ ಸುಮಾರಿಗೆ ಹೊಸ ಶಿಲಾಯುಗದಲ್ಲಿನ ಮಾನವ ಹಲವು ಮಹತ್ವದ ಸಂಶೋಧನೆಗಳನ್ನು ಮಾಡಿದ. ಬೇಟೆಗಾರ, ಪಶುಪಾಲಕನಾದ, ಪಶುಗಳೊಂದಿಗೆ ಅಲೆಮಾರಿಯಾಗಿದ್ದವನು ಒಂದೇ ಸ್ಥಳದಲ್ಲಿ ವಾಸಿಸಲು ಪ್ರಾರಂಭಿಸಿದ. ಸಂಗ್ರಹಕಾರನಾಗಿದ್ದವನು ಬೆಳೆ- ಬೆಳೆಯ ತೊಡಗಿದೆ.
ನಾಗರಿಕತೆಗಳು ಬೆಳವಣಿಗೆಗೆ ಸಹಾಯಕವಾದ ಸಂಶೋಧನೆಗಳು .
ಹೈನುಗಾರಿಕೆ ಮತ್ತು ಮಾಂಸಕ್ಕಾಗಿ ಪ್ರಾಣಿಗಳ ಸಾಕಣೆ, ಹೊಸ ಶಸ್ತ್ರಗಳು, ಉಪಕರಣಗಳು, ಮಣ್ಣಿನ ಪಾತ್ರೆಗಳು, ಲೋಹದ ಪಾತ್ರೆಗಳು, ಮೀನುಹಿಡಿಯುವ ಬಲೆಗಳು, ಬೆಂಕಿಯ ಉಪಯೋಗ, ಬಟ್ಟೆ ನೇಯುವುದು, ಗುಡಿಸಲು-ಮನೆ ಕಟ್ಟುವುದು, ಹೊಸ ಸಾಗಾಟದ ಸಾಮಾಗ್ರಿಗಳು ವಿಶೇಷವಾಗಿ ಸಾಗಾಟಕ್ಕೆ ಪ್ರಾಣಿ ಮತ್ತು ಚಕ್ಕಡಿಗಳ ಬಳಕೆ ಮುಂತಾದ ಸಂಶೋಧನೆಗಳು ನಾಗರಿಕತೆಗಳು ಬೆಳವಣಿಗೆಯಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು ತಂದವು. ಇವುಗಳಿಂದ ಹೊಸ ಕಸುಬು, ಕಲೆ ಮತ್ತು ವೃತ್ತಿಗಳ ಬೆಳವಣಿಗೆ ಸಾಧ್ಯವಾಯಿತು.
‘ತಿರುಗುವ ಚಕ್ರಗಳು ನಾಗರಿಕತೆಯನ್ನು ಬೆಳೆಸಿದವು’-ಎಂಬ ಉಕ್ತಿ ಉಲ್ಲೇಖ ಯೋಗ್ಯವಾಗಿದೆ. ಮನುಷ್ಯನು ಕಂಡುಹಿಡಿದ ತಿರುಗುವ ಚಕ್ರ-ಬಡಿಗ, ಕುಂಬಾರ, ಕಮ್ಮಾರ, ಹಗ್ಗ-ಮಾಡುವವರ ವೃತ್ತಿಯಲ್ಲಿ ಮತ್ತು ಸಾರಿಗೆ ವ್ಯವಸ್ಥೆಯಲ್ಲಿ ತೀವ್ರ ಸ್ವರೂಪದ ಬದಲಾವಣೆಗಳನ್ನು ತರುವುದರೊಂದಿಗೆ ನಾಗರಿಕತೆಗಳು ಬೆಳವಣಿಗೆಯ ವೇಗವನ್ನು ಹೆಚ್ಚಿಸಿತು.
ಸಾ.ಶ.ಪೂ 6,000 ದ ಸುಮಾರಿಗೆ ಮನುಷ್ಯ ಮಾಡಿದ ಅತ್ಯಂತ ಮಹತ್ವದ ಸಂಶೋಧನೆ-ಉಳುಮೆ. ಇದು ಮನುಷ್ಯನ ಜೀವನ ಶೈಲಿಯಲ್ಲಿ ಬಹುದೊಡ್ಡ ಬದಲಾವಣೆಯನ್ನು ತಂದಿತು. ಕೃಷಿ ಮನುಷ್ಯನನ್ನು ಮಣ್ಣಿನ ಮಗನನ್ನಾಗಿಸಿತು. ಕೃಷಿ ಮಣ್ಣಿನೊಂದಿಗೆ ಮನುಷ್ಯನ ಒಡನಾಟವನ್ನು ಬೆಳೆಸಿತಲ್ಲದೆ, ವರ್ಷವಿಡೀ ಅವನಿಗೆ ಆಹಾರ ಮತ್ತು ಅವನ ಸಾಕು ಪ್ರಾಣಿಗಳಿಗೆ ಮೇವನ್ನು ಒದಗಿಸಿತು.
ನಾಗರಿಕತೆಗಳು ಪದದ ಅರ್ಥ .
ನಾಗರಿಕತೆಗಳು ಎಂಬುದನ್ನು ‘ಸಂಸ್ಕೃತಿ’ಗೆ ಸಮಾನ ಅರ್ಥದಲ್ಲಿ ಬಳಸುತ್ತಾರೆ. ನಾಗರಿಕತೆ ಎಂಬುದು ವಿಶಾಲ ಅರ್ಥದಲ್ಲಿ ‘ಹೆಚ್ಚು ಸ್ಪಷ್ಟವಾಗಿ ವ್ಯಾಖ್ಯಾನಿಸಿದ’ ಮಾನವ ಸಮಾಜವಾಗಿದೆ. ಇಂಗ್ಲೀಷಿನ ಸಿವಿಲಿಜೇಷನ್ ಎಂಬ ಪದವು ‘ಸಿವಿಲಿಸ್’ ಎಂಬ ಲ್ಯಾಟಿನ್ ಪದದಿಂದ ಬಂದಿದೆ. ಇದರ ಅರ್ಥ ನಗರ ಅಥವಾ ನಗರ ರಾಜ್ಯವೆಂದಾಗುತ್ತದೆ. ನಾಗರಿಕತೆ ಎಂಬುದು ಹೆಚ್ಚು ಪಕ್ವವಾದ ಮತ್ತು ಸಂಸ್ಕರಿಸಿದ ಜೀವನ ಎಂಬರ್ಥವನ್ನು ಕೊಡುತ್ತದೆ. ನಾಗರಿಕತೆ ಮತ್ತು ಸಂಸ್ಕೃತಿ ಎಂಬ ಪದಗಳು ಎಲ್ಲ ಸಂದರ್ಭಗಳಲ್ಲಿ ಒಂದಕ್ಕೊಂದು ಪರ್ಯಾಯವಾಗಲಾರವು. ನಾವು ಜನಸಮೂಹವೊಂದನ್ನು ಅನಾಗರಿಕರೆಂದು ನಿರ್ಣಯಿಸಿದ್ದರೂ ಅವರು ತಮ್ಮದೇ ಆದ ಸಂಸ್ಕೃತಿಯನ್ನು ಹೊಂದಿರುತ್ತಾರೆ. ನಾವೇನು ಹೊಂದಿದ್ದೇವೆ ಎಂಬುದು ನಾಗರಿಕತೆಯಾದರೆ ನಾವೇನಾಗಿದ್ದೇವೆ ಎಂಬುದು ಸಂಸ್ಕೃತಿ ಎನ್ನಿಸಿಕೊಳ್ಳುತ್ತದೆ.
ನಾಗರಿಕತೆಗಳು ಎಂಬುದು ಭೌತಿಕ ಸಾಧನೆಗಳಿಗೆ ಸಂಬಂಧಿಸಿದ್ದಾಗಿದೆ. ಆದರೆ ಸಂಸ್ಕೃತಿ ಎಂಬುದು ವೈಚಾರಿಕ, ಆಧ್ಯಾತ್ಮಿಕ ಮತ್ತು ತತ್ವಜ್ಞಾನ ಕ್ಷೇತ್ರದ ಸಾಧನೆ ಮತ್ತು ಸಿದ್ದಿಯಾಗಿದೆ. ನಾಗರಿಕತೆ ಎಂಬುದು ನಗರದಲ್ಲಿ ವಾಸ ಎಂದು ಗ್ರಹಿಸಲ್ಪಟ್ಟರೆ ಸಂಸ್ಕೃತಿ ಎಂಬುದು ಜನರ ಜೀವನ ಶೈಲಿ ಎಂದು ಗ್ರಹಿಸಲ್ಪಟ್ಟಿದೆ.
ನಾಗರಿಕತೆ ವಿಶಾಲ ಪದವಾಗಿದ್ದು ಸಂಸ್ಕೃತಿ ಅದರ ಭಾಗವಾಗಿದೆ. ನಾಗರಿಕತೆ ಎಂಬುದು ಭೌಗೋಳಿಕ ಹಿನ್ನೆಲೆಯನ್ನು ಹೊಂದಿದ ಬೃಹತ್ ಜನ ಸಮುದಾಯವಾಗಿದೆ. ಪ್ರತಿಯೊಂದು ನಾಗರಿಕತೆಯೂ ತನ್ನದೇ ಆದ ಸಂಸ್ಕೃತಿಯನ್ನು ಹೊಂದಿರುತ್ತದೆ. ಒಮ್ಮೊಮ್ಮೆ ಒಂದೇ ನಾಗರಿಕತೆಯಲ್ಲಿ ಒಂದಕ್ಕಿಂತ ಹೆಚ್ಚಿನ ಸಂಸ್ಕೃತಿಗಳಿರುವುದುಂಟು.ಆದ್ದರಿಂದ ಸಂಸ್ಕೃತಿ ಎಂಬುದು ನಾಗರಿಕತೆಯಲ್ಲಿಯೇ ಇರುತ್ತದೆ. ಸಾಮಾನ್ಯವಾಗಿ ಸಂಸ್ಕೃತಿ ಇಲ್ಲದೇ ನಾಗರಿಕತೆ ಇರುವುದಿಲ್ಲ. ಸಂಸ್ಕೃತಿಯು ಪ್ರಸರಣ ಮತ್ತು ವರ್ಗಾವಣೆಗೆ ಒಳಪಟ್ಟಿದೆ. ಆದರೆ ನಾಗರಿಕತೆಯು ಇಡಿಯಾಗಿ ಹಸ್ತಾಂತರಗೊಳ್ಳುತ್ತದೆ. ನಾಗರಿಕತೆಗಳು ಬೆಳೆಯುತ್ತವೆ, ವಿಭಜನೆಯಾಗುತ್ತವೆ, ಅವನತಿಯಾಗುತ್ತವೆ ಮತ್ತು ಕೊನೆಗೊಳ್ಳುತ್ತವೆ.
ನಾಗರಿಕತೆಗಳು ಮತ್ತು ಸಂಸ್ಕೃತಿಯ ವ್ಯತ್ಯಾಸಗಳು.
‘ನದಿ ಬಯಲುಗಳು ನಾಗರಿಕತೆಯ ತೊಟ್ಟಿಲುಗಳಾಗಿವೆ’
ಜಗತ್ತಿನ ಬಹಳಷ್ಟು ನಾಗರಿಕತೆಗಳು ನದಿಗಳ ದಡದಲ್ಲಿಯೇ ಬೆಳೆದಿವೆ. ವಿಶಾಲ ಮತ್ತು ಸಮತಟ್ಟಾದ ಬಯಲುಗಳು, ಫಲವತ್ತಾದ ಮಣ್ಣು, ನೀರಾವರಿಗೆ ಮತ್ತು ಕುಡಿಯಲು ಸಾಕಷ್ಟು ಪ್ರಮಾಣದಲ್ಲಿ ನೀರು ಮತ್ತು ಬೆಚ್ಚಗಿನ ಹವಾಗುಣ ಇವುಗಳು ಸಾಮಾನ್ಯವಾಗಿ ನದಿ ಬಯಲುಗಳಲ್ಲೇ ದೊರೆಯುವುದರಿಂದ ಮನುಷ್ಯ, ಅಲ್ಲಿಯೇ ಮೊದಲು ವಾಸಿಸಲು ಪ್ರಾರಂಭಿಸಿದನು. 5.6 ಮಿಲಿಯನ್ ವರ್ಷಗಳ ಹಿಂದೆ ಮನುಷ್ಯನ ವಿಕಾಸವಾಯಿತಾದರೂ ಅವನು ನಾಗರಿಕ ಜೀವನವನ್ನು ಪ್ರಾರಂಭಿಸಿದ್ದು 7.000 ವರ್ಷಗಳ ಹಿಂದೆ ಎಂದು ಅಂದಾಜಿಸಲಾಗಿದೆ. ನಾಗರಿಕತೆಗಳು ಪ್ರಾರಂಭವಾದಂದಿನಿಂದ ಮನುಷ್ಯ ಅತ್ಯಂತ ಕಡಿಮೆ ಅವಧಿಯಲ್ಲಿ ಉಲ್ಲೇಖನೀಯ ಪ್ರಗತಿಯನ್ನು ಸಾಧಿಸಿದ.
ಜಗತ್ತಿನ ಪ್ರಮುಖ ಪ್ರಾಚೀನ ನಾಗರಿಕತೆಗಳಾದ ಈಜಿಪ್ಟ್, ಮೆಸೊಪೊಟೇಮಿಯಾ, ಸಿಂಧೂ, ಚೀನಾ ಮುಂತಾದವುಗಳು ಮಾನವನ ವಾಸದ ಮೊದಲ ತಾಣಗಳಾಗಿವೆ. ಈ ಪ್ರದೇಶಗಳಲ್ಲಿ ಮಾನವರು ಮೊದಲು ಗುಂಪುಗಳನ್ನು ರಚಿಸಿಕೊಂಡು ವಾಸಿಸತೊಡಗಿದರು. ಆದ್ದರಿಂದ ನದಿ ತೀರಗಳನ್ನು ನಾಗರಿಕತೆಗಳ ತೊಟ್ಟಿಲುಗಳು ಎಂದು ಕರೆಯುತ್ತೇವೆ. ನೈಲ್ ಕಣಿವೆ, ಯುಫ್ರೆಟಿಸ್ ಮತ್ತು ಟೈಗ್ರಿಸ್ ಬಯಲು, ಸಿಂಧೂ ಬಯಲು, ಹುವಾಂಗ್ ಹೋ ಮತ್ತು ಯಾಂಗ ಸಿಕಿಯಾಂಗ್ ನದಿಬಯಲುಗಳು ಮಹಾನ್ ನಾಗರಿಕತೆಗಳು ವಿಕಸಿಸುವಲ್ಲಿ ಸಹಾಯಕವಾಗಿವೆ.
ನಾಗರಿಕತೆಗಳು ನಿರ್ದಿಷ್ಟ ಕಾಲವನ್ನು ನಿರ್ಧರಿಸುವಲ್ಲಿ ಇತಿಹಾಸಕಾರರು ಅನೇಕ ತೊಂದರೆಗಳನ್ನು ಎದುರಿಸುತ್ತಿದ್ದಾರೆ. ಆದ್ದರಿಂದ ಇಂಥದ್ದೇ ನದಿ ಕಣಿವೆಯು ನಾಗರಿಕತೆಯ ಮೊದಲ ತೊಟ್ಟಿಲು ಎಂದು ಖಚಿತವಾಗಿ ಹೇಳಲಾಗದು.
ನಾಗರಿಕತೆಯ ಬೆಳವಣಿಗೆಗೆ ಸಹಾಯಕವಾದ ಅಂಶಗಳು .
• ಪ್ರವಾಹದ ಸಮಯದಲ್ಲಿ ನದಿಗಳು ತಮ್ಮ ಇಕ್ಕೆಲಗಳಲ್ಲಿ ಸಂಚಯಿಸಿದ ಫಲವತ್ತಾದ ಮಣ್ಣು,
• ಕೃಷಿ ಹಾಗೂ ಗೃಹ ಬಳಕೆಗೆ ತಡೆರಹಿತ ಮತ್ತು ನಿರಂತರ ನೀರಿನ ಸರಬರಾಜು.
• ಸಾಮಾನ್ಯವಾಗಿ ನದಿ ತೀರಗಳಲ್ಲಿ ಕಂಡುಬರುವ ವಾಸಯೋಗ್ಯವಾದ ವಾಯುಗುಣ.
• ಮಾನವನಿಗೆ ಸಾಕಷ್ಟು ಪ್ರಮಾಣದಲ್ಲಿ ಲಭ್ಯವಾದ ಆಹಾರ- ಧಾನ್ಯಗಳು ಹಣ್ಣು ತರಕಾರಿಗಳು ಮತ್ತು ಅವನ ಪ್ರಾಣಿಗಳಿಗೆ ವಿಫುಲವಾದ ಮೇವಿನ ಲಭ್ಯತೆ.ನದಿಗಳು ಮೀನುಗಾರಿಕೆಗೆ ಅನುಕೂಲವಾಗಿವೆ.
• ನದಿಗಳು ಆಂತರಿಕ ಜಲಮಾರ್ಗಗಳನ್ನು ಒದಗಿಸಿ ವ್ಯಾಪಾರ ಮತ್ತು ಸಂಪರ್ಕಕ್ಕೆ ಅನುವು ಮಾಡಿಕೊಟ್ಟವು.
ಮೇಲ್ಕಾಣಿಸಿದ ಅಂಶಗಳು ಮನುಷ್ಯನ ಆಹಾರಕ್ಕಾಗಿ ಅಲೆದಾಟ ಮತ್ತು ಅವನ ಜೀವಕ್ಕಿರುವ ಅಪಾಯವನ್ನು ಕಡಿಮೆ ಮಾಡಿದವು. ‘ಮನುಷ್ಯರು ರಚನಾತ್ಮಕ ಕಾರ್ಯ ಮಾಡಲು ಸಿಗುವ ಹೆಚ್ಚಿನ ವಿರಾಮದ ವೇಳೆಯೇ ನಾಗರಿಕತೆಯ ವಿಕಾಸಕ್ಕೆ ಪ್ರಮುಖ ಕಾರಣ’ ಎಂಬ ಬಲವಾದ ವಾದವೊಂದಿದೆ. ಈ ಹಿನ್ನಲೆಯಲ್ಲಿ ನದಿಬಯಲಯಗಳು ಸಾಕಷ್ಟು ಆಹಾರ ಮತ್ತು ವಿರಾಮವನ್ನು ಒದಗಿಸಿಕೊಟ್ಟು, ನಾಗರಿಕತೆಗಳ ಬೆಳವಣಿಗೆಗೆ ಸಹಾಯಕವಾದವು. ಮಾನವ ಲೋಹಗಳನ್ನು ಶೋಧಿಸಿದ ಹಾಗು ಉಪಕರಣಗಳನ್ನು ತಯಾರಿಸಿದನು. ಭೂಮಿಯನ್ನು ಉಳುಮೆ ಮಾಡಲು ಪ್ರಾರಂಭಿಸಿದನು. ಕಟ್ಟಿಗೆ ಮತ್ತು ಕಲ್ಲುಗಳನ್ನು ಬಳಸಿ ಗುಡಿಸಲು ಮತ್ತು ಕಟ್ಟಡಗಳನ್ನು ನಿರ್ಮಿಸಿದ. ಆಯುಧಗಳು, ಪಾತ್ರೆಗಳನ್ನು, ದೋಣಿಗಳನ್ನು ನಿರ್ಮಿಸಿದನು. ಬಟ್ಟೆ, ಹೊದಿಕೆ. ಪೀಠೋಪಕರಣ ಮತ್ತು ಆಭರಣ ಮುಂತಾದವುಗಳನ್ನು ತಯಾರಿಸಿದನು.
ನಾಗರಿಕತೆಯ ಲಕ್ಷಣಗಳು .
• ನಿರ್ದಿಷ್ಟ ಜೀವನೋಪಾಯವನ್ನು ಮತ್ತು ನಿಶ್ಚಿತವಾದ ವಾಸದ ನೆಲೆಗಳನ್ನು ಹೊಂದಿರುವ ಜನಸಮೂಹ.
• ಆಡಳಿತದ ನಿರ್ದಿಷ್ಟ ವಿಧಾನಗಳನ್ನು ಹೊಂದಿರುವ ಜನಸಮೂಹ.
• ವಿಶಿಷ್ಟ ಸಾಮಾಜಿಕ ಪದ್ಧತಿ ಹಾಗೂ ಸಾಂಸ್ಕೃತಿಕ ಕುರುಹುಗಳನ್ನು ಹೊಂದಿದ ಜನಸಮೂಹ.
• ಮಾನವನು ವಿವಿಧ ಯುಗಗಳಲ್ಲಿ ಹಲವಾರು ಲೋಹಗಳನ್ನು ಶೋಧಿಸಿ ಅವುಗಳ ಬಳಕೆಯನ್ನು ಕಂಡುಕೊಂಡನು.
• ಜನಸಮೂಹವೊಂದು ಸಂಕೀರ್ಣ ಆಡಳಿತ ವ್ಯವಸ್ಥೆಯೊಂದನ್ನು ಹೊಂದಿ, ಅಧಿಕಾರ ವರ್ಗ, ಲೆಕ್ಕ ಪತ್ರದ ಅವಶ್ಯಕತೆ ಹಾಗೂ ತನ್ಮೂಲಕ ಬರವಣಿಗೆಯ ಬೆಳವಣಿಗೆಗೆ ಸಹಾಯವಾಯಿತು.
• ನಾಗರಿಕತೆಗಳು-ಭೂಮಾಲಿಕತ್ವ, ಉತ್ಪಾದನೆಯ ಹಂಚಿಕೆ, ವೈಯಕ್ತಿಕ ಆಸ್ತಿ, ತೆರಿಗೆ, ವಸ್ತುವಿನಿಮಯ, ಹಣ ಮತ್ತು ವ್ಯಾಪಾರ ಮುಂತಾದ ಸಂಕೀರ್ಣ ಅರ್ಥವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸಿದವು.
• ಒಂದು ನಾಗರಿಕತೆಯ ಜನರು ಇನ್ನೊಂದು ನಾಗರಿಕತೆಯ ಜನರ ಮೇಲೆ ರಾಜಕೀಯ, ಆರ್ಥಿಕ ಮತ್ತು ಸಾಂಸ್ಕೃತಿಕ ಪ್ರಭಾವವನ್ನು ಬೀರಿದರು. ಇದು ಸಾಮ್ರಾಜ್ಯವಾದಕ್ಕೆ ಕಾರಣವಾಯಿತು.
• ನಾಗರಿಕತೆಯ ಬೆಳವಣಿಗೆಯು ಆಂತರಿಕ ಮತ್ತು ಬಾಹ್ಯ ರಕ್ಷಣೆಯ ಅವಶ್ಯಕತೆಯನ್ನುಂಟುಮಾಡಿತು.
• ಮಳೆ, ಗಾಳಿ, ಗುಡುಗು-ಸಿಡಿಲು, ಮಹಾಪೂರ, ಬರಗಾಲ, ಋತುಗಳು, ಹುಟ್ಟು-ಸಾವು ಮತ್ತು ಹವಾಮಾನ ಬದಲಾವಣೆ ಮುಂತಾದ ನೈಸರ್ಗಿಕ ವಿದ್ಯಮಾನಗಳು ಧರ್ಮ, ತತ್ವಜ್ಞಾನ ಮತ್ತು ವಿಜ್ಞಾನದ ಬೆಳವಣಿಗೆಗೆ ಪ್ರಚೋದನೆ ನೀಡಿದವು.
• ನಾಗರಿಕತೆಗಳು ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರ್ಥಿಕ, ಭೌಗೋಳಿಕ ಮತ್ತು ಪರಿಸರ ಕಾರಣಗಳಿಂದಾಗಿ ಉನ್ನತಿ, ಅವನತಿ ಹೊಂದಿದ್ದನ್ನು ಕಾಣುತ್ತೇವೆ.
ಆತ್ಮೀಯ ಗೆಳೆಯರೇ ಮುಂಬರುವ ಎಲ್ಲಾ ಸ್ಪರ್ಧಾತ್ಮ ಪರಿಕ್ಷೆಗಳಿಗೆ ಉಪಯುಕ್ತ ಮಾಹಿತಿಯನ್ನು ನೀಡಲಾಗುತ್ತದೆ ಎಲ್ಲಾ ಸ್ನೇಹಿತರು ಕೆಳಗೆ ಕೋಟ್ಟಿರಿವ ನಮ್ಮ ವಾಟ್ಸಆಫ್ ಮತ್ತು ಟೆಲಿಗ್ರಾಂ ಚಾನಲ್ ಗ್ರೂಪ್ ಗೆ ಬೇಗನೆ ಸೇರಿಕೊಳ್ಳಿ .
ಧನ್ಯವಾದಗಳು . . . . .
1 thought on “ಜಗತ್ತಿನ ಪ್ರಾಚೀನ ನಾಗರಿಕತೆಗಳು ಇತಿಹಾಸ – ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತ ಮಾಹಿತಿ-2024.”