Gurantee Scheme: ಗೃಹಜ್ಯೋತಿ: ಸರಾಸರಿ ಬಳಕೆ ಪರಿಷ್ಕರಣೆ ಸದ್ಯಕ್ಕಿಲ್ಲ?-2024.
ಬೆಂಗಳೂರು:- ರಾಜ್ಯದ ಪ್ರತಿ ಗೃಹ ಬಳಕೆದಾರರಿಗೆ ಮಾಸಿಕ ತಲಾ 200 ಯೂನಿಟ್‌ವರೆಗೆ ಉಚಿತ ವಿದ್ಯುತ್ ಕಲ್ಪಿಸುವ ಮಹತ್ವಾಕಾಂಕ್ಷಿ “ಗೃಹಜ್ಯೋತಿ’ ಗ್ಯಾರಂಟಿ ಯೋಜನೆಗೆ 1 ವರ್ಷ ತುಂಬಿದೆ. ಆರಂಭದಲ್ಲಿ ಸರಕಾರ ಹೇಳಿದಂತೆ ಬಳಕೆಯ ಸರಾಸರಿ ಪರಿಷ್ಕರಣೆ ಆಗಬೇಕಿತ್ತು. ಆದರೆ, ಈಗ ಈ ನಿಟ್ಟಿನಲ್ಲಿ ಸರಕಾರ ಮೀನಮೇಷ ಎಣಿಸುತ್ತಿದೆ.
ಗೃಹಜ್ಯೋತಿ ಅಡಿ ರಾಜ್ಯದ ಸರಾಸರಿ ಗೃಹಬಳಕೆ ಪ್ರಮಾಣ 56 ಯೂನಿಟ್ ಇದೆ. ಈ ನಿಗದಿತ ಸರಾಸರಿ ಮೇಲೆ 10 ಯೂನಿಟ್‌ವರೆಗೆ ಹೆಚ್ಚುವರಿಯಾಗಿ ಬಳಸಲು ಅವಕಾಶ ಕಲ್ಪಿಸಲಾಗಿದೆ. ಈ ಪ್ರಮಾಣವನ್ನು 1 ವರ್ಷ ತುಂಬಿದ ಅನಂತರ ಪರಿಷ್ಕರಿಸಲಾಗುವುದು ಎಂದು ಯೋಜನೆಗೆ ಚಾಲನೆ ನೀಡುವ ಸಂದರ್ಭ ಇಂಧನ ಸಚಿವ ಕೆ.ಜೆ. ಜಾರ್ಜ್ ಪ್ರಕಟಿಸಿದ್ದರು. ಅದರಂತೆ ಜುಲೈ ಅಂತ್ಯಕ್ಕೇ ವರ್ಷ ಪೂರ್ಣಗೊಂಡಿದ್ದರೂ, ಈ ಬಗ್ಗೆ ಸರಕಾರ ಚಕಾರ ಎತ್ತುತ್ತಿಲ್ಲ.
ಸಾಮಾನ್ಯವಾಗಿ ವಿದ್ಯುತ್ ಬಳಕೆ ಪ್ರಮಾಣ ವರ್ಷದಿಂದ ವರ್ಷಕ್ಕೆ ಏರಿಕೆ ಕ್ರಮದಲ್ಲೇ ಸಾಗುತ್ತಿದ್ದು, ಕೆಇಆರ್‌ಸಿ ಮೂಲಗಳ ಪ್ರಕಾರವೇ ಬೇಡಿಕೆ ಸರಾಸರಿ ಶೇ. 10ರಷ್ಟು ಹೆಚ್ಚಳ ಆಗುತ್ತಿದೆ. ಈ ಮಧ್ಯೆ ಉಚಿತ ವ್ಯವಸ್ಥೆ ಪರಿಚಯಿಸಿದ ಬಳಿಕ ಪ್ರತಿ ಗ್ರಾಹಕರ ಮಾಸಿಕ ಬಳಕೆಯಲ್ಲಿ ಮತ್ತಷ್ಟು ಏರಿಕೆ ಕಂಡುಬಂದಿದೆ. ಡಿ-ಲಿಂಕ್ ವ್ಯವಸ್ಥೆ ಕಲ್ಪಿಸಿದ್ದರಿಂದ ಹಿಂದಿನ ಸರಾಸರಿ ಬಳಕೆ ಮುಂದುವರಿಸಲು ಅವಕಾಶ ದೊರಕಿದೆ. ಈ ಸಂದರ್ಭದಲ್ಲಿ ಬಳಕೆ ಪ್ರಮಾಣ ಪರಿಷ್ಕರಿಸಿದರೆ, ಸಹಜವಾಗಿ ಇನ್ನಷ್ಟು ಆರ್ಥಿಕ ಹೊರೆ ಆಗಲಿದೆ. ಹಾಗಾಗಿ, ಪರಿಷ್ಕರಿಸುವ ಸಾಹಸದಿಂದ ಸರಕಾರ ದೂರ ಉಳಿಯಲು ನಿರ್ಧರಿಸಿದೆ ಎಂದು ತಿಳಿದುಬಂದಿದೆ.
ಲೆಕ್ಕಾಚಾರ ಹೀಗಿದೆ: ಯೋಜನೆ ಆರಂಭದಲ್ಲಿ ನೋಂದಣಿಯಾದವರ ಸಂಖ್ಯೆ 1.60 ಕೋಟಿ ಇತ್ತು. ಈಗ ಅದು 1.70 ಕೋಟಿ ತಲುಪಿದೆ. ಇನ್ನು ಕಳೆದ ಡಿಸೆಂಬರ್ ಮತ್ತು 2024ರ ಮೇನಲ್ಲಿಯ “ಶೂನ್ಯ’ ಬಿಲ್ ಪಡೆದವರ ಸಂಖ್ಯೆಯಲ್ಲಿ 10 ಲಕ್ಷ ಕಡಿಮೆಯಾಗಿದೆ. ಅಂದರೆ ಯೋಜನೆ ಫಲಾನುಭವಿಗಳು ನಿಗದಿತ ಪ್ರಮಾಣ ಮೀರಿ ಬಳಕೆ ಮಾಡುತ್ತಿರುವುದು ಸ್ಪಷ್ಟ. 2023ರ ಆಗಸ್ಟ್‌ನಿಂದ 2024ರ ಜೂನ್‌ವರೆಗೆ ಯೋಜನೆ ಅಡಿ ಸರಕಾರ ಬಿಡುಗಡೆ ಮಾಡಿದ ಸಬ್ಸಿಡಿ ಮೊತ್ತ 8,239 ಕೋಟಿ ರೂ. ಆಗಿದೆ. ಇನ್ನು ವಾರ್ಷಿಕ ಬೇಡಿಕೆ ವೃದ್ಧಿ ಶೇ. 10ರಷ್ಟಿದ್ದು, ಇದಕ್ಕೆ ಅನುಗುಣವಾಗಿಯೇ ಲೆಕ್ಕಹಾಕಿದರೂ ಈ ಪರಿಷ್ಕರಣೆಯಿಂದ ಸರಕಾರಕ್ಕೆ ಕನಿಷ್ಠ 100 ಕೋಟಿ ರೂಪಾಯಿಗಳಿಗೂ ಅಧಿಕ ಹೊರೆಬೀಳಲಿದೆ.
ಗೃಹಜ್ಯೋತಿ ಅಡಿ ಫಲಾನುಭವಿಗಳ ಸರಾಸರಿ ಬಳಕೆ ಪ್ರಮಾಣವನ್ನು ಪರಿಷ್ಕರಿಸುವ ಪ್ರಸ್ತಾವನೆ ಸದ್ಯಕ್ಕೆ ನಮ್ಮ ಮುಂದಿಲ್ಲ. ಇದರ ಬಗ್ಗೆ ಚರ್ಚೆಯೂ ನಡೆದಿಲ್ಲ. ಇದೆಲ್ಲವೂ ಸರಕಾರದ ಮಟ್ಟದಲ್ಲಿ ತೀರ್ಮಾನ ಆಗುವಂಥದ್ದು. ಒಂದು ವೇಳೆ ಪರಿಷ್ಕರಣೆ ಅಗತ್ಯವೆನಿಸಿ, ಸರಕಾರ ನಿರ್ಧಾರ ಕೈಗೊಂಡರೆ ಆಗ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು.