Unified Pension Scheme: ಏಕೀಕೃತ ಪಿಂಚಣಿ ಯೋಜನೆ ಜಾರಿಗೆ ಸರ್ಕಾರದ ನಿರ್ಧಾರ-2024.
Unified PensionScheme: ಹೊಸ ಪಿಂಚಣಿ ಯೋಜನೆ (ಎನ್‌ಪಿಎಸ್) ಗೆ ವ್ಯಾಪಕ ವಿರೋಧ ವ್ಯಕ್ತವಾದ ಬೆನ್ನಲ್ಲೇ ಸರ್ಕಾರ ಏಕೀಕೃತ ಪಿಂಚಣಿ ಯೋಜನೆಯನ್ನು (ಯುಪಿಎಸ್) ಜಾರಿ ಮಾಡಲು ನಿರ್ಧರಿಸಿದೆ. ಈ ಯೋಜನೆಯಿಂದ 23 ಲಕ್ಷ ಕೇಂದ್ರ ಸರ್ಕಾರಿ ನೌಕರರು ಪ್ರಯೋಜನ ಪಡೆಯಲಿದ್ದಾರೆ ಎಂದು ಕೇಂದ್ರ ಸಚಿವ ಅಶ್ವಿನ್ ವೈಷ್ಣವ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ವಿರೋಧದ ನಡುವೆಯೂ ಕೇಂದ್ರ ಸರ್ಕಾರ ಹೊಸ ಪಿಂಚಣಿ ಯೋಜನೆಯನ್ನು ಆರಂಭಿಸಿತ್ತು. ಬಿಜೆಪಿಯೇತರ ರಾಜ್ಯಗಳ ವಿರೋಧ ವ್ಯಕ್ತಪಡಿಸಿದ ಬಳಿಕ ಕೇಂದ್ರ ಪಿಂಚಣಿ ಯೋಜನೆ ಜಾರಿ ಮಾಡಲು ನಿರ್ಧರಿಸಿದೆ.
ಪ್ರಧಾನಿ ನರೇಂದ್ರ ಮೋದಿಯವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಏಕೀಕೃತ ಪಿಂಚಣಿ ಯೋಜನೆ (ಯುಪಿಎಸ್) ಜಾರಿಗೆ ಅನುಮೋದನೆ ನೀಡಲಾಗಿದೆ. ಕೇಂದ್ರ ಪಿಂಚಣಿ ಯೋಜನೆಯು ಏಪ್ರಿಲ್ 1, 2025ರಿಂದ ಜಾರಿಗೆ ಬರಲಿದೆ. ಉದ್ಯೋಗಿಗಳು ಹೊಸ ಪಿಂಚಣಿ ಯೋಜನೆ (ಎನ್‌ಪಿಎಸ್) ಅಥವಾ ಏಕೀಕೃತ ಪಿಂಚಣಿ ಯೋಜನೆ (ಯುಪಿಎಸ್) ಎರಡರ ನಡುವೆ ಒಂದನ್ನು ಆಯ್ಕೆ ಮಾಡಿಕೊಳ್ಳುವ ಆಯ್ಕೆಯನ್ನು ಹೊಂದಿರುತ್ತಾರೆ ಎಂದು ಅಶ್ವಿನ್ ವೈಷ್ಣವ್ ಹೇಳಿದ್ದಾರೆ.
ಏನಿದು ಏಕೀಕೃತ ಪಿಂಚಣಿ ಯೋಜನೆ.
ಈ ಯೋಜನೆಯು ಸರ್ಕಾರಿ ನೌಕರರಿಗೆ ಖಚಿತವಾದ ಪಿಂಚಣಿ, ಕುಟುಂಬ ಪಿಂಚಣಿ ಮತ್ತು ಖಚಿತವಾದ ಕನಿಷ್ಠ ಪಿಂಚಣಿಯನ್ನು ನೀಡುವ ಗುರಿಯನ್ನು ಹೊಂದಿದೆ.
1.ಖಚಿತ ಪಿಂಚಣಿ.
ಕನಿಷ್ಠ 25 ವರ್ಷಗಳ ಸೇವೆಯನ್ನು ಪೂರ್ಣಗೊಳಿಸುವ ಸರ್ಕಾರಿ ನೌಕರರಿಗೆ ನಿವೃತ್ತಿಯ ಮೊದಲು ಕಳೆದ 12 ತಿಂಗಳ ಸರಾಸರಿ ಮೂಲ ವೇತನದ 50 ಪ್ರತಿಶತವನ್ನು ಪಿಂಚಣಿ ನೀಡುವುದನ್ನು ಈ ಯೋಜನೆಯು ಖಾತರಿಪಡಿಸುತ್ತದೆ. ಇದು ಕನಿಷ್ಠ 10 ವರ್ಷಗಳ ಸೇವೆಯವರೆಗಿನ ಕಡಿಮೆ ಸೇವಾ ಅವಧಿಗೆ ಅನುಪಾತದಲ್ಲಿರುತ್ತದೆ ಎಂದು ಹೇಳಲಾಗಿದೆ.
2. ಖಚಿತವಾದ ಕುಟುಂಬ ಪಿಂಚಣಿ.
ಪಿಂಚಣಿ ಪಡೆಯುತ್ತಿರುವ ನಿವೃತ್ತ ನೌಕರ ಮೃತಪಟ್ಟ ಸಂದರ್ಭದಲ್ಲಿ ಪಿಂಚಣಿದಾರರ ಕುಟುಂಬವು, ಮೃತ ನೌಕರ ಪಡೆಯುತ್ತಿದ್ದ ಪಿಂಚಣಿಯಲ್ಲಿ 60% ರಷ್ಟನ್ನು ಪಡೆಯಲಿದ್ದಾರೆ.
3. ಕನಿಷ್ಠ ಪಿಂಚಣಿ.
ಕನಿಷ್ಠ 10 ವರ್ಷಗಳ ಸೇವೆಯ ನಂತರ ಸರ್ಕಾರಿ ನೌಕರರಿಗೆ ನಿವೃತ್ತಿಯ ನಂತರ ಈ ಯೋಜನೆಯು ತಿಂಗಳಿಗೆ ₹ 10,000 ಪಿಂಚಣಿ ನೀಡುವ ಭರವಸೆ ನೀಡುತ್ತದೆ.
ಈಗ ಜಾರಿಯಲ್ಲಿರುವ ಪಿಂಚಣಿ ಯೋಜನೆ ಪ್ರಕಾರ ನೌಕರರು ಶೇಕಡಾ 10 ರಷ್ಟು ಕೊಡುಗೆ ನೀಡಿದರೆ, ಕೇಂದ್ರ ಸರ್ಕಾರ ಶೇಕಡಾ 14 ರಷ್ಟು ಕೊಡುಗೆ ನೀಡುತ್ತಿದೆ. ಏಕೀಕೃತ ಪಿಂಚಣಿ ಯೋಜನೆ (ಯುಪಿಎಸ್) ಜಾರಿಯಾದ ಬಳಿಕ ಇದನ್ನು ಶೇಕಡಾ 18ಕ್ಕೆ ಹೆಚ್ಚಿಸಲಾಗುವುದು ಎಂದು ಹೇಳಲಾಗಿದೆ.
ಕೇಂದ್ರ ಸರ್ಕಾರಿ ನೌಕರರು ಇಂದು ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿದ್ದರು. ಸಭೆಯ ವೇಳೆ ಏಕೀಕೃತ ಪಿಂಚಣಿ ಯೋಜನೆಗೆ ಕೇಂದ್ರ ನೌಕರರು ಸಹಮತ ವ್ಯಕ್ತಪಡಿಸಿದ್ದಾರೆ ಎಂದು ಸಚಿವ ಅಶ್ವಿನ್ ವೈಷ್ಣವ್ ಹೇಳಿದ್ದಾರೆ.