7th Pay Commission: ಸರ್ಕಾರಿ ನೌಕರರಿಗೆ ಆಯೋಗ ಶಿಫಾರಸು ಮಾಡಿರುವ ರಜೆಗಳು ಯಾವವು ? -2024.
ನಾವು ಒದಗಿಸುವ ಎಲ್ಲ ಮಾಹಿತಿಗಳು ನಿಮಗೆ ಇಷ್ಟವಾಗುತ್ತಿದ್ದರೆ ತಪ್ಪದೇ ನಮ್ಮ ಇತರೆ ಗ್ರೂಪ್ ಗಳಿಗೆ (ಟೆಲಿಗ್ರಾಮ್ ಗ್ರೂಪ್ ಹಾಗೂ ವಾಟ್ಸ್ ಅಪ್ ) ತಾವು ಜಾಯಿನ್ ಆಗಿ ಮತ್ತು ನಿಮ್ಮ ಸ್ನೇಹಿತರಿಗೆ ಶೇರ್ . ಪ್ರತಿದಿನ ನಾವು ಹಾಕುವ ಮಾಹಿತಿ ನಿಮಗೆ ಬಂದು ನೇರವಾಗಿ ತಲುಪುತ್ತದೆ.
ಕರ್ನಾಟಕ ಸರ್ಕಾರಕ್ಕೆ 558 ಪುಟಗಳ ಸಂಪುಟ-1ರ ವರದಿಯಲ್ಲಿ ಕೆ. ಸುಧಾಕರ್ ರಾವ್ ನೇತೃತ್ವದ ರಾಜ್ಯ 7ನೇ ವೇತನ ಆಯೋಗ ಕೇವಲ ವೇತನ, ಭತ್ಯೆಗಳ ಕುರಿತು ಶಿಫಾರಸು ಮಾಡಿಲ್ಲ. ಬದಲಾಗಿ ಸರ್ಕಾರಿ ನೌಕರರ ಹಲವು ಸೌಲಭ್ಯಗಳ ಕುರಿತು ಶಿಫಾರಸುಗಳನ್ನು ಸಲ್ಲಿಕೆ ಮಾಡಿದೆ. ಇದರಲ್ಲಿ ಸರ್ಕಾರಿ ನೌಕರರ ರಜೆಯ ಬಗ್ಗೆಯೂ ವಿವರಣೆ ನೀಡಲಾಗಿರುತ್ತದೆ. ಸರ್ಕಾರ ಆಯೋಗದ ಶಿಫಾರಸುಗಳನ್ನು ಜಾರಿಗೊಳಿಸುತ್ತಿದೆ. ಆಯೋಗ ರಜೆಯ ಕುರಿತು ಮಾಡಿರುವ ಶಿಫಾರಸುಗಳು ಸಂಪೂರ್ಣ ವಿವರ ಇಲ್ಲಿದೆ.
ಆರೈಕೆ ನೀಡುವ ರಜೆ. ಸರ್ಕಾರವು ಮಾದರಿ ಉದ್ಯೋಗದಾತನಾಗಿರಬೇಕು ಮತ್ತು ಸಾಧ್ಯವಿರುವ ಕಡೆಗಳಲ್ಲಿ ಎಲ್ಲಾ ರೀತಿಯ ವ್ಯಕ್ತಿಗಳಿಗೆ ಮತ್ತು ಸನ್ನಿವೇಶಗಳಿಗೆ ಸ್ಪಂದಿಸಬೇಕು ಎಂದು ಒತ್ತಿ ಹೇಳುವ ಅವಶ್ಯಕತೆ ಇಲ್ಲ. ಪ್ರತಿಕೂಲ ಸ್ಥಿತಿಯಲ್ಲಿರುವ ಸಿಬ್ಬಂದಿಯ ಭಾಗವಹಿಸುವಿಕೆಯನ್ನು ಹೆಚ್ಚಿಸಲು ಮತ್ತು ಒಳಗೊಳ್ಳುವಿಕೆಯನ್ನು ಉತ್ತೇಜಿಸಲು ಕೇಂದ್ರ ಮತ್ತು ಇತರೆ ರಾಜ್ಯಗಳಲ್ಲಿ ಇರುವಂತಹ ಭತ್ಯೆಗಳು ಮತ್ತು ಪ್ರೋತ್ಸಾಹಧನಗಳ ಉಪಯುಕ್ತ ಆಚರಣೆಗಳ ಬಗ್ಗೆ ತಿಳುವಳಿಕೆ ಹೊಂದುವುದು ರಾಜ್ಯ ಸರ್ಕಾರದ ಉತ್ತಮ ನಡೆಯಾಗುತ್ತದೆ.
ಆಯೋಗದ ಗಮನಕ್ಕೆ ಬಂದಿರುವ ಇಂತಹ ಒಂದು ಉಪಕ್ರಮವು ಕೇರಳದ ವೇತನ ಪರಿಷ್ಕರಣೆ ಆಯೋಗದ ಪ್ರಸ್ತಾಪಿಸಿರುವ ಶೇ.40 ರಷ್ಟು ವೇತನದೊಂದಿಗೆ ಒಂದು ವರ್ಷದ ಆರೈಕೆ ನೀಡುವ ರಜೆಯಾಗಿದ್ದು, ಸಿಬ್ಬಂದಿಯ ಕುಟುಂಬದಲ್ಲಿ ಹಾಸಿಗೆ ಹಿಡಿದಿರುವ ಹಿರಿಯರ ಮತ್ತು 3 ವರ್ಷದ ಕೆಳಗಿನ ಅಸ್ವಸ್ಥ ಮಕ್ಕಗಳ ಆರೈಕೆ ಮಾಡಲು ಸಹಾಯಕವಾಗಲಿದೆ. ಈ ರಜೆಯನ್ನು ಕೆಲವು ಷರತ್ತುಗಳೊಂದಿಗೆ ಮಂಜೂರು ಮಾಡಲಾಗುತ್ತಿದ್ದು, ಪ್ರಾಥಮಿಕವಾಗಿ, ರಜೆಯ ಅರ್ಜಿಯೊಂದಿಗೆ ಸಲ್ಲಿಸಬೇಕಾದ ಪ್ರಮಾಣೀಕೃತ ವೈದ್ಯರಿಂದ ಪಡೆದ ದೃಢೀಕರಣ ಪತ್ರವು ಒಂದಾಗಿರುತ್ತದೆ.
ಇತ್ತೀಚೆಗೆ, ಹೆತ್ತವರು, ಪತಿ/ ಪತ್ನಿಯ ಹೆತ್ತವರು ಅಥವಾ ಕುಟುಂಬದ ಹಿರಿಯರು ಅಥವಾ ತೀವ್ರ ಅಸ್ವಸ್ಥತೆಯಿಂದ ನರಳುತ್ತಿರುವ ಪುಟ್ಟ ಮಕ್ಕಳ ಆರೈಕೆಯಲ್ಲಿನ ಸಮಸ್ಯೆಗಳು ವಿಶೇಷವಾಗಿ ನಗರ ಪ್ರದೇಶಗಳಲ್ಲಿ ವಿಭಕ್ತ ಕುಟುಂಬಗಳ ಪ್ರಮಾಣದ ಏರಿಕೆಯಿಂದ ನಿರಂತರವಾಗಿ ಹೆಚ್ಚಾಗುತ್ತಿದೆ.ರಾಜ್ಯ ಸರ್ಕಾರವು ಸಹ ಈ ಕೆಳಗಿನ ಷರತ್ತು ಮತ್ತು ನಿಬಂಧನೆಗಳೊಂದಿಗೆ ಆರೈಕೆ ನೀಡುವ ರಜೆಯನ್ನು ಜಾರಿಗೊಳಿಸುವಂತೆ ಆಯೋಗವು ಶಿಫಾರಸು ಮಾಡುತ್ತದೆ.
1. ಯಾವುದೇ ಲಿಂಗ ತಾರತಮ್ಯವಿಲ್ಲದೆ ರಾಜ್ಯ ಸರ್ಕಾರಿ ನೌಕರರ ತಮ್ಮ ಸೇವಾವಧಿಯಲ್ಲಿ ಎರಡು ಬಾರಿ ಈ ರಜೆಯನ್ನು ಪಡೆಯಬಹುದಾಗಿದೆ. ಒಟ್ಟಾರೆ ಸೇವಾವಧಿಯಲ್ಲಿ ಗರಿಷ್ಠ 180 ದಿನಗಳು (6 ತಿಂಗಳು) ಆರೈಕೆ ನೀಡುವ ರಜೆಯನ್ನು ಪಡೆಯಬಹುದಾಗಿದೆ.
2. ರಜೆ ಅವಧಿಯಲ್ಲಿ, ರಾಜ್ಯ ಸರ್ಕಾರಿ ನೌಕರರು ರಜೆ ತೆರಳುವ ಮುನ್ನ ಪಡೆಯುತ್ತಿದ್ದ ವೇತನದ ಶೇ.50ರಷ್ಟು ಮೊತ್ತಕ್ಕೆ ಅರ್ಹರಾಗುತ್ತಾರೆ.
3. ಪ್ರತಿ ಬಾರಿಯೂ ಆರೈಕೆ ನೀಡುವ ರಜೆಯನ್ನು ಪಡೆದಾಗ, ಕನಿಷ್ಠ ರಜೆಯ ಅವಧಿಯು ಒಂದು ತಿಂಗಳಿಗಿಂತಲೂ ಕಡಿಮೆ ಇಲ್ಲದಂತೆ ಮತ್ತು ಗರಿಷ್ಠ ಮೂರು ತಿಂಗಳವರೆಗೆ ರಜೆ ಪಡೆಯಬಹುದು.
4. ಯಾವ ವರ್ಷದಲ್ಲಿ ರಜೆಯನ್ನು ಪಡೆಯುತ್ತಾರೋ ಆ ವರ್ಷದಲ್ಲಿ ಗಳಿಕೆ ರಜಾ ನಗದೀಕರಣಕ್ಕೆ ನೌಕರರು ಅರ್ಹರಾಗಿರುವುದಿಲ್ಲ. ಬಳಸಿಕೊಳ್ಳದ ಆರೈಕೆ ನೀಡುವ ರಜೆಯನ್ನು ನಗದೀಕರಣ ಮಾಡಿಕೊಳ್ಳಲು ಅವಕಾಶವಿರುವುದಿಲ್ಲ.
5. ಆರೈಕೆ ರಜೆಯನ್ನು ಇತರೆ ಯಾವುದೇ ವಿಧವಾದ ರಜೆಗಳೊಂದಿಗೆ ವಿಲೀನಗೊಳಿಸತಕ್ಕದ್ದಲ್ಲ ಮತ್ತು ಇತರೆ ಯಾವುದೇ ವಿಧವಾದ ರಜೆಯ ಖಾತೆಯಿಂದ ಕಡಿತಗೊಳಿಸತಕ್ಕದಲ್ಲ.
6. ಸಕ್ಷಮ ಪ್ರಾಧಿಕಾರವು ಮಂಜೂರು ಮಾಡಿದ ರಜೆಯ ವಿವರಗಳನ್ನು ನೌಕರರ ಸೇವಾ ಪುಸ್ತಕದಲ್ಲಿ ನಮೂದಿಸಬೇಕು.
ಈ ನಿಬಂಧನೆಗಳು ಮತ್ತು ಷರತ್ತುಗಳು ಕೇವಲ ನಿದರ್ಶನತ್ಮಕವಾಗಿವೆ. ರಾಜ್ಯ ಸರ್ಕಾರಿ ನೌಕರರಿಗೆ ಆರೈಕೆ ನೀಡುವ ರಜೆಯನ್ನು ಮಂಜೂರು ಮಾಡಲು ಆಯೋಗವು ಶಿಫಾರಸು ಮಾಡುತ್ತಾದರೂ, ಅದನ್ನು ಜಾರಿಗೊಳಿಸುವ ವಿಧಿ-ವಿಧಾನಗಳನ್ನು ಮತ್ತು ನಿಬಂಧನೆ ಮತ್ತು ಷರತ್ತುಗಳನ್ನು ರಾಜ್ಯ ಸರ್ಕಾರವು ನಿಗದಿಪಡಿಸಬಹುದು ಎಂದು ಆಯೋಗ ಹೇಳಿದೆ .